ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತ: ಪ್ರಣಿತಿ ಶಿಂಧೆ ವಿಶ್ವಾಸ

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತ: ಪ್ರಣಿತಿ ಶಿಂಧೆ ವಿಶ್ವಾಸ - Janathavaniದಾವಣಗೆರೆ, ಏ. 7- ರಾಜ್ಯದಲ್ಲೆಡೆ ಕಾಂಗ್ರೆಸ್ ಅಲೆಯಿದ್ದು, ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರಲಿದೆ ಎಂದು ಎಐಸಿಸಿ ಸದಸ್ಯರೂ ಆಗಿರುವ ಚುನಾವಣಾ ಜಿಲ್ಲಾ ವೀಕ್ಷಕಿ ಪ್ರಣತಿ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದರು.

ನಿನ್ನೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ವಾತಾವರಣವಿದ್ದು, ಪಕ್ಷಕ್ಕೆ ಹೆಚ್ಚು ಸ್ಥಾನಗಳು ಲಭಿಸುವ ಸಾಧ್ಯತೆ ಹೆಚ್ಚಿದೆ ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಅಲೆ ಇದೆ ಎಂಬ ಅತಿಯಾದ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳದೇ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮುಖಂಡರು, ಕಾರ್ಯಕರ್ತರು ಒಗ್ಗಟಿನಿಂದ ಶ್ರಮಿಸುವ ಅಗತ್ಯವಿದೆ ಎಂದು ಹೇಳಿದರು.

ಬಿಜೆಪಿಯವರು ಏನೇ ತಂತ್ರಗಳನ್ನು ಹೆಣೆದರೂ ರಾಜ್ಯದ ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಇದೆ. ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ದ್ರೋಹ ಎಸಗಿದ್ದು, ಜನರು ಭ್ರಮನಿರಸನಗೊಂಡಿದ್ದಾರೆ ಎಂದು ತಿಳಿಸಿದರು.

ಪಕ್ಷದಲ್ಲಿ ಬಂಡಾಯ ಏಳುವ ಆಕಾಂಕ್ಷಿಗಳನ್ನು ಕರೆಯಿಸಿ ಪಕ್ಷದ ಅಧಿಕೃತ ಅಭ್ಯರ್ಥಿ ಪರ ಪ್ರಚಾರ ಮಾಡುವಂತೆ ಅವರ ಮನವೊಲಿಸಲಾಗುವುದು. ಮಾಯ ಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಸವಿತಾಬಾಯಿ ಮಲ್ಲೇಶನಾಯ್ಕ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಣತಿ ಅವರು, ಪಕ್ಷದ ಮುಖಂಡರು ಅವರೊಂದಿಗೆ ಮಾತುಕತೆ ನಡೆಸಿ ಪಕ್ಷದ ಪರ ಕೆಲಸ ಮಾಡುವಂತೆ ಮನವೊಲಿಸಲಾಗುವುದು ಎಂದರು.

ಕಾಂಗ್ರೆಸ್ಸಿನವರಿಂದಲೇ ಅವರ ವೈಯಕ್ತಿಕ ಚಾರಿತ್ರ್ಯಹರಣವಾಗಿದೆ ಎಂಬ ಸವಿತಾಬಾಯಿ ಅವರ ಆರೋಪದ ಕುರಿತು ಮಾತನಾಡಿದ ಅವರು, ಓರ್ವ ಮಹಿಳೆಯ ಮರ್ಯಾದೆಗೆ ಧಕ್ಕೆ ಯಾರೇ ತಂದರೂ ಅದು ತಪ್ಪು. ಆದರೆ ವಾಸ್ತವಾಂಶ ಅರಿತು ಪಕ್ಷದ ಹಿರಿಯರ ಜೊತೆಗೆ ಮಾತುಕತೆ ನಡೆಸಿ, ಸರಿಪಡಿಸಲಿದ್ದಾರೆ ಎಂದು ಹೇಳಿದರು.

error: Content is protected !!