ಟಿಕೆಟ್‌ ಘೋಷಣೆಯಾಗದಿದ್ದರೂ ಹರಿಹರದಲ್ಲಿ ಬಿಜೆಪಿ ಪ್ರಚಾರ ಜೋರು

ಟಿಕೆಟ್‌ ಘೋಷಣೆಯಾಗದಿದ್ದರೂ ಹರಿಹರದಲ್ಲಿ ಬಿಜೆಪಿ ಪ್ರಚಾರ ಜೋರು

ಮಲೇಬೆನ್ನೂರು, ಏ. 7 – ಹರಿಹರ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ಟಿಕೆಟ್‌ ಘೋಷಣೆಯತ್ತ ಎಲ್ಲರ ಚಿತ್ತ ಇದ್ದರೂ ಬಿಜೆಪಿ ಆಕಾಂಕ್ಷಿಗಳು ಮಾತ್ರ ಒಟ್ಟಾಗಿ ಮನೆ – ಮನೆ ಪ್ರಚಾರ ಆರಂಭಿಸಿದ್ದಾರೆ.

ಕಳೆದ ತಿಂಗಳು 5 ರಿಂದ ಕಳೆದ ಕ್ಷೇತ್ರದಿಂದ ವಿವಿಧ ಹಳ್ಳಿಗಳಲ್ಲಿ ಆಕಾಂಕ್ಷಿಗಳಾದ ಮಾಜಿ ಶಾಸಕ ಬಿ.ಪಿ. ಹರೀಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್‌, ಬಿಜೆಪಿ ಮುಖಂಡ ಚಂದ್ರಶೇಖರ್‌ ಪೂಜಾರ್‌ ಅವರುಗಳು ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸುತ್ತಾ, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ವಿಶೇಷ ಎಂದರೆ ಟಕೆಟ್‌ ಘೋಷಣೆಯಾಗದಿದ್ದರೂ ಮೂವರು ಆಕಾಂಕ್ಷಿಗಳು ಒಟ್ಟಾಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ಈ ಬಗ್ಗೆ `ಜನತಾವಾಣಿ’ಯೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್‌ ಅವರು ಏಪ್ರಿಲ್‌ 10ರ ನಂತರ ಟಿಕೆಟ್‌ ಘೋಷಣೆ ಆಗುವ ಸಾಧ್ಯತೆ ಇದ್ದು, ಅಲ್ಲಿಯವರೆಗೆ ಕಾಯುವುದು ಬೇಡ. ಸರ್ಕಾರದ ಸಾಧನೆಗಳನ್ನು ಕರ ಪತ್ರದ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡೋಣ ಎಂಬ ಉದ್ದೇಶದಿಂದ ಪ್ರಚಾರ ಆರಂಭಿಸಿದ್ದೇವೆ.

ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೂ ಮೊದಲು ಕೊಂಡಜ್ಜಿ, ಕೆಂಚನಹಳ್ಳಿ, ಬುಳ್ಳಾಪುರ, ಕುರುಬರಹಳ್ಳಿ, ಹೊತ್ತಿಗೇನಹಳ್ಳಿ, ಸಾರಥಿ, ಚಿಕ್ಕಬಿದರಿ, ಪಾಮೇನಹಳ್ಳಿ, ದೀಟೂರು ಗ್ರಾಮಗಳಲ್ಲಿ ಮನೆ ಮನೆ ಪ್ರಚಾರ ಮಾಡಿದ್ದೆವು. ನಂತರ ಉಕ್ಕಡಗಾತ್ರಿ, ನಂದಿಗುಡಿ, ವಾಸನ, ಕೆ.ಎನ್‌.ಹಳ್ಳಿ, ಹರಳಹಳ್ಳಿ, ದೇವರ ಬೆಳಕೆರೆ, ಬೂದಿಹಾಳ್‌ನಲ್ಲಿ ಮತ್ತು ಶುಕ್ರವಾರ ಹೊಳೆಸಿರಿಗೆರೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಬಿಜೆಪಿಗೆ ಮತ ನೀಡುವಂತೆ ಕೇಳಿದ್ದೇವೆ.

ಶನಿವಾರ ಜಿಗಳಿ ಮತ್ತು ಜಿ. ಬೇವಿನಹಳ್ಳಿಯಲ್ಲಿ ಪ್ರಚಾರ ಮಾಡುತ್ತೇವೆ. ಟಿಕೆಟ್‌ ಯಾರಿಗೇ ಕೊಟ್ಟರೂ ಹರಿಹರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ಗೆಲುವು ನಿಶ್ಚಿತ ಎಂದು ಹನಗವಾಡಿ ವೀರೇಶ್‌ ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ಹೊಳೆಸಿರಿಗೆರೆಯಲ್ಲಿ ನಡೆದ ಮನೆ – ಮನೆ ಪ್ರಚಾರದಲ್ಲಿ ಬಿ.ಪಿ.ಹರೀಶ್‌, ಹನಗವಾಡಿ ವೀರೇಶ್‌, ಚಂದ್ರಶೇಖರ್‌ ಪೂಜಾರ್‌, ಹಿರಿಯ ಮುಖಂಡ ಎನ್‌.ಜಿ ನಾಗನಗೌಡ್ರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಹಾಲೇಶಪ್ಪ, ತಾ. ಗ್ರಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್‌, ಕಾರ್ಯದರ್ಶಿ ಗಳಾದ ಹುಗ್ಲಿ ಮಹಾಂತೇಶ್‌, ಆದಾಪುರ ವೀರೇಶ್‌ ಸೇರಿದಂತೆ ಸ್ಥಳೀಯ ಮುಖಂ ಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಜೆಡಿಎಸ್‌ ಅಭ್ಯರ್ಥಿ ಹೆಚ್‌.ಎಸ್‌. ಶಿವಶಂಕರ್‌ ಅವರು ಕಳೆದ ಒಂದು ತಿಂಗಳಿನಿಂದ ಬಿರುಸಿನ ಪ್ರಚಾರ ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಶಾಸಕ ಎಸ್‌. ರಾಮಪ್ಪ ಅವರು ಕಾಂಗ್ರೆಸ್‌ ಪಕ್ಷದ ಗ್ಯಾರಂಟಿಗಳನ್ನು ಕೆಲವು ಕಡೆಗಳಲ್ಲಿ ಕೊಟ್ಟು, ಮಲೇಬೆನ್ನೂರಿನಲ್ಲಿ ಕಾಂಗ್ರೆಸ್‌ ಸಭೆ ನಡೆಿಸಿದ್ದು ಬಿಟ್ಟರೆ ಉಳಿದ ಆಕಾಂಕ್ಷಿಗಳು ಟಿಕೆಟ್‌ಗಾಗಿ ಪ್ರಯತ್ನದಲ್ಲಿದ್ದಾರೆ.

error: Content is protected !!