ಸೇತುವೆಗೆ ಬೇಕಿದೆ ಕಾಯಕಲ್ಪ
ನೂರಾರು ಹಳ್ಳಿಗಳಿಗೆ ಸಂಪರ್ಕ ಕೊಂಡಿಯಾಗಿರುವ ಬೇತೂರು ದೊಡ್ಡ ಹಳ್ಳದ ಸೇತುವೆಯನ್ನು ಅಗಲೀಕರಣ ಮಾಡಬೇಕು. ನಿತ್ಯ ಅಪಘಾತಗಳನ್ನು ಕಂಡು ಸಂಚಾರಕ್ಕೆ ಜನರು ಭಯಪಡುತ್ತಿದ್ದು, ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನ ಸೆಳೆದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬುದು ಬೇತೂರಿನ ಗ್ರಾಮಸ್ಥರ ಅಳಲು.
ದಾವಣಗೆರೆ : ತಾಲ್ಲೂಕಿನ ಬೇತೂರು ಗ್ರಾಮ ಸಮೀಪದ ದಾವಣಗೆರೆ-ಜಗಳೂರು ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ದೊಡ್ಡ ಹಳ್ಳಕ್ಕೆ ಶತಮಾನದ ಹಿಂದೆ ನಿರ್ಮಿಸಲಾದ ಸೇತುವೆ ಇದೀಗ ಅಪಘಾತ ವಲಯವಾಗಿ ಮಾರ್ಪಟ್ಟಿದೆ.
ಇತ್ತೀಚಿಗಷ್ಟೇ ಸೇತುವೆ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದು, ಓರ್ವ ವ್ಯಕ್ತಿ ಗಂಭೀರ ಸ್ಥಿತಿ ತಲುಪಿದ್ದ. ಡಿಕ್ಕಿಯ ಪರಿಣಾಮ ತಡೆಗೋಡೆ ಮುರಿದು ಬಿದ್ದಿತ್ತು. ಆದರೆ, ಈವರೆಗೂ ಅದರ ದುರಸ್ತಿಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯವರು ಮುಂದಾಗಿಲ್ಲ.
ಬಸ್ ಅಪಘಾತ ಘಟನೆ ನಡೆದ ಕೆಲವೇ ದಿನಗಳಲ್ಲಿ ಟ್ರ್ಯಾಕ್ಟರ್ ಹಾಗೂ ಬಸ್ ನಡುವೆ ಮತ್ತೊಂದು ಅಪಘಾತ ಸಂಭವಿಸಿ ಅನೇಕರಿಗೆ ಗಾಯಗಳಾಗಿದ್ದವು.
ಜಗಳೂರು ಹಾಗೂ ಚಳ್ಳಕೆರೆ ತಾಲ್ಲೂಕಿನಿಂದ ದಾವಣಗೆರೆಗೆ ಸಾವಿರಾರು ವಾಹನಗಳು ಈ ಮಾರ್ಗದ ಮೂಲಕವೇ ಸಾಗುತ್ತವೆ. ನಗರದ ವಿವಿಧ ಶಾಲಾ ಬಸ್‌ಗಳು ಸಹ ಬೇತೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಮಕ್ಕಳನ್ನು ಕರೆತರಲು ಇದೆ ಸೇತುವೆಯ ಮೇಲೆ ಸಂಚರಿಸುತ್ತವೆ.
ಮೊನ್ನೆ ನಡೆದ ಅಪಘಾತ ಘಟನೆಯಲ್ಲಿ ನಾಲ್ಕು ಮೀಟರ್‌ನಷ್ಟು ತಡೆಗೋಡೆ ಹಾಳಾಗಿದ್ದು, ಇದರಿಂದ ಪ್ರಯಾಣಿಕರನ್ನು ರಕ್ಷಿಸಲು ಹಾಕಿರುವ ಬ್ಯಾರಿಕೇಡ್ ಗಳಿಂದ ಪ್ರಯಾಣವು ಮತ್ತಷ್ಟು ಜಟಿಲವಾಗಿದೆ. ಹಳೆಯದಾದ ಈ ಸೇತುವೆಯು ನವೀಕರಣಗೊಂಡ ರಸ್ತೆಯ ಅಗಲಕ್ಕಿಂತ ಕಿರಿದಾಗಿರುವುದರಿಂದ, ಇಕ್ಕಟ್ಟಿನಲ್ಲಿಯೇ ವಾಹನಗಳು ತೆರಳಬೇಕಾಗಿದೆ.
ಸಾವಿನ ದಾರಿಗೆ ಎಡೆ ಮಾಡಿಕೊಡುತ್ತಿರುವ ದಾವಣಗೆರೆ-ಬೇತೂರು ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಬಸ್ ಉರುಳಿ ಬಿದ್ದರೂ ಸಹ ಸಂಬಂಧಪಟ್ಟ ಇಲಾಖೆ ಅಥವಾ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಕನಿಷ್ಠ ಪಕ್ಷ ಅಪಾಯದ ಸೂಚನಾ ಫಲಕವನ್ನಾದರೂ ಅಳವಡಿಸಿಲ್ಲ. ಕೂಡಲೇ ಸೇತುವೆಗೆ ತಡೆಗೋಡೆ ನಿರ್ಮಿಸಬೇಕು.
ಚೇತನ್ ಹಂಚಿನಮನೆ, ಗ್ರಾ. ಪಂ ಸದಸ್ಯರು, ಎಲೆಬೇತೂರು.
ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಸೇತುವೆ, ಬೃಹತ್ ಗಾತ್ರದ ಟ್ರಕ್ ಮತ್ತು ಲಾರಿಗಳು ಸಂಚರಿಸಿದರೂ ಸಹ ತನ್ನ ಜೀವ ಉಳಿಸಿಕೊಂಡಿರು ವುದು ಈ ಭಾಗದ ಪ್ರಯಾಣಿಕರಲ್ಲಿ ಆಶ್ಚರ್ಯ ಮೂಡಿಸುತ್ತದೆ. ಆದರೆ, ಸೇತುವೆಯ ಮಗ್ಗಲಿನಲ್ಲಿ ಗಿಡ-ಮರಗಳು ಬೆಳೆದಿದ್ದು, ಸರಿಯಾದ ನಿರ್ವಹಣೆ ಇಲ್ಲದೆ ಇದೀಗ ಶಿಥಿಲಾವಸ್ಥೆ ತಲುಪಿದೆ.
ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಸೇತುವೆಯ ಮೇಲೆ ಮಳೆ ನೀರು ನಿಂತು ಗುಂಡಿಗಳಾಗುತ್ತಿವೆ. ಗುಂಡಿಗೆ ಮಣ್ಣು ಹಾಕಿ ತೇಪೆ ಹಚ್ಚುವ ಕೆಲಸ ಮಾಮೂಲಾಗಿದೆ.
ಸೇತುವೆಯು ಆಧುನಿಕ ದಿನಗಳಲ್ಲಿ ಹೆಚ್ಚಿರುವ ವಾಹನಗಳ ಸಂಚಾರಕ್ಕೆ ಸೂಕ್ತವಾಗಿಲ್ಲ. ಮುಖಾ-ಮುಖಿಯಾಗಿ ಎರಡು ಬೃಹತ್ ಲಾರಿ ಅಥವಾ ಬಸ್ಸುಗಳು ಸೇತುವೆಯ ಮೇಲೆ ಎದುರಾದರೆ ಚಲಿಸಲು ಹರಸಾಹಸ ಪಡುವ ಸಂದರ್ಭ ಇಲ್ಲಿ ಸಹಜವಾಗಿದೆ.
ಹಾಗಾಗಿ, ಹಳೆಯ ಸೇತುವೆಯನ್ನು ಅಗಲೀಕರಣ ಮಾಡಬೇಕು. ಇಲ್ಲವೇ ನೂತನ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕೆಂಬುದು ಈ ಮಾರ್ಗದ ಪ್ರಯಾಣಿಕರ ಒತ್ತಾಯವಾಗಿದೆ.
ಮಹಾಂತೇಶ ಎನ್ ಬೇತೂರು