ಪಂಚಮಸಾಲಿ ಸಮುದಾಯದ ನಾಯಕರಲ್ಲಿ ಮೀಸಲಾತಿಗೆ ಪರ – ವಿರೋಧ ನಿಲುವು
ಬೆಂಗಳೂರು, ಏ. 3 – ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ ಪ್ರಕಟಿಸಿರುವ 2ಡಿ ಮೀಸಲಾತಿಗೆ ಸಮುದಾಯದ ನಾಯಕರಲ್ಲಿ ಪರ ಹಾಗೂ ವಿರೋಧದ ನಿಲುವುಗಳು ಕಂಡು ಬಂದಿವೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಯಾವುದೇ ಕಾರಣಕ್ಕೂ ಸರ್ಕಾರದ ಆದೇಶವನ್ನು ಒಪ್ಪುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಇದನ್ನು ನಾವೆಲ್ಲರೂ ಖಂಡಿಸಬೇಕು. ಮುಂದೆ ಸರ್ಕಾರ ಬದಲಾದಾಗ ನಮಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು. ಮಾಜಿ ಶಾಸಕರಾದ ವಿನಯ ಕುಲಕರ್ಣಿ, ಎ.ಬಿ.ಪಾಟೀಲ ಸಹ ಸರ್ಕಾರ ಪ್ರಕಟಿಸಿರುವ ಮೀಸಲಾತಿಗೆ ಆಕ್ಷೇಪಿಸಿದ್ದಾರೆ.
ನಾವು 2ಎ ಅಡಿಯಲ್ಲಿ ಶೇ.15ರ ಮೀಸಲಾತಿ ಕೇಳಿದ್ದೆವು. ಈ ಮೀಸಲಾತಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ, ಕೇವಲ ಶೇ.2ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ ಎಂದು ಆಕ್ಷೇಪಿಸಿದರು.
ಈ ಮಧ್ಯೆ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಸಿ.ಸಿ. ಪಾಟೀಲ್ ಅವರು ಮಾತನಾಡಿ, ಬಿಜೆಪಿ ಸರ್ಕಾರ ಕೊಟ್ಟಿರುವ ಮೀಸಲಾತಿಯನ್ನು ನೀವು ಯಾಕೆ ಒಪ್ಪಿಕೊಂಡಿದ್ದೀರಿ ಎಂದು ಕಾಂಗ್ರೆಸ್ ನಾಯ ಕರು ಕೂಡಲಸಂಗಮದ ಲಿಂಗಾಯತ ಪಂಚ ಮಸಾಲಿ ಪೀಠದ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಗೆ ಕಿರುಕುಳ ನೀಡುತ್ತಿದ್ದಾರೆ. ಬಿಜೆಪಿ ಮೀಸಲಾತಿ ನೀಡಲಿಲ್ಲ ಅಂದರೆ ಅದನ್ನೆ ಅಸ್ತ್ರ ಮಾಡಿಕೊಳ್ಳಲು ಸಿದ್ಧವಾಗಿದ್ದರು ಎಂದು ಆರೋಪಿಸಿದರು.
ಇದು ಮುಖಂಡರಾದ ವಿಜಯಾನಂದ ಕಾಶಪ್ಪನವರು ಮತ್ತು ವಿನಯ್ ಕುಲಕರ್ಣಿಯವರ ನಡವಳಿಕೆಯಿಂದ ಗೊತ್ತಾಗುತ್ತದೆ. ಈಗ ಈ ಮೀಸಲಾತಿ ಬೇಡ ಅಂತ ಅವರು ಹೇಳುತ್ತಿರುವುದು ನೋಡಿದರೆ ಅವರ ರಾಜಕೀಯ ಉದ್ದೇಶವನ್ನು ತೋರಿಸುತ್ತದೆ ಎಂದು ಹೇಳಿದರು.
ಸರ್ಕಾರದ ಮೀಸಲಾತಿ ಘೋಷಣೆಯನ್ನು ಒಪ್ಪಿಕೊಂಡಿದ್ದಕ್ಕೆ ಶ್ರೀಗಳಿಗೆ ಬೆದರಿಕೆ ಕರೆಗಳು ಬರುತ್ತಿವೆ. ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ನಾಯಕರಿಂದಲೇ ಬೆದರಿಕೆ ಕರೆ ಬರುತ್ತಿವೆ ಎಂದು ಸಚಿವರು ಆರೋಪ ಮಾಡಿದ್ದರು.
ಸ್ವಾಮೀಜಿಗೆ ಭದ್ರತೆ : ಕೂಡಲಂಗಮದ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಬೆದರಿಕೆ ಕರೆ ಬರುತ್ತಿವೆ ಎಂದು ಶಾಸಕ ಅರವಿಂದ ಬೆಲ್ಲದ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.