ದಾವಣಗೆರೆ, ಏ.3- ಲೋಕಿಕೆರೆ ಗ್ರಾಮದ ಸಣ್ಣಪ್ಳ ಮನೆತನದ ಶತಾಯುಷಿ ಶ್ರೀಮತಿ ತಿಮ್ಮಮ್ಮ 105 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಮಾಗಿದ ಈ ಹಿರಿಯ ಜೀವಕೆ ಗೌರವಾರ್ಪಣೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು.
ಸದಾ ಹೊಲ -ಮನೆ, ದನ- ಕರುಗಳೆಂದು, ಹೊಲಕೆ ಬುತ್ತಿ ಹೊತ್ತು ತಂದು ತುತ್ತು ನೀಡಿದ, ದುಡಿವ ನೂರಾರು ಕಷ್ಟ ಜೀವಿಗಳಿಗೆ ದುಡಿದ ಈ ಜೀವಕ್ಕೆ ಹುಟ್ಟಿದ ಹಬ್ಬದ ಕಲ್ಪನೆಯೇ ಇಲ್ಲ. ಮನೆ ಹಿರಿಯರು ಬಾಳಿ ಬದುಕಿದ ಮನೆಯೇ ನನ್ನ ಅರಮನೆ. ಇಲ್ಲೇ ಕೊನೆಯುಸಿರು ಎಂದು ಹಪಹಪಿಸುತ್ತಲೇ ಸರಿ ಸುಮಾರು 105 ವರ್ಷಗಳ ಸವೆಸಿದ ಅಜ್ಜಿ ತಿಮ್ಮಮ್ಮ.
ಈ ವಯಸ್ಸಿನಲ್ಲಿಯೂ ಶಿಸ್ತು ಬದ್ಧ ಜೀವನ, ಯಾವುದೇ ಕಿರಿಕಿರಿ ಇಲ್ಲದ ಆರೋಗ್ಯ, ಕೊಂಚ ಹಣವಿದ್ದರೂ ಬಚ್ಚಿಟ್ಟು, ಅಷ್ಟಿಷ್ಟು ಕೈ ಕಾಸು ಮೊಮ್ಮಕ್ಕಳಿಗೇ ಹಂಚಿ ಬಚ್ಚುಬಾಯಲೀ ಸಂತಸದ ನಗೆ ಬೀರುವ ತಿಮ್ಮವ್ವ ಶತಾಯುಷಿ ಆದರೂ, ವಯಸ್ಸು ಆಕೆಯನ್ನು ಬಾಧಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು ಸಂಭ್ರ ಮದ ದಿನ ಆಚರಿಸಿ ಆಕೆಗೊಂದು ಗೌರವ ಸಲ್ಲಿಸಿದರು. ಯುಗಾದಿ ಈ ಬಾರಿ ಚಂದ್ರನ ದರ್ಶನ ಪಡೆದು, ಹೊಸ ವರ್ಷದ ಆರಂಭದಲ್ಲಿ ಸಿಂಗಾರಗೊಂಡ ಊರಲ್ಲಿ, ತೇರಿನ ನೆಪದಲ್ಲಿ, ಕೇಕ್ ಕತ್ತರಿಸುವ ಮೂಲಕ ಮಕ್ಕಳು, ಮೊಮ್ಮಕ್ಕಳು, ಗಿರಿ ಮೊಮ್ಮಕ್ಕಳು. ಕಿರಿ ಮೊಮ್ಮಕ್ಕಳು, ಸೊಸೆಯಂದಿರು ಸೇರಿ ದಂತೆ, ಬಂಧು- ಬಳಗ, ಆತ್ಮೀಯರೆಲ್ಲ ಸೇರಿ ಸಂತಸ ಪಡಿಸಿ ಸಂಭ್ರಮಪಟ್ಟರು. ಈ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಟ್ರಸ್ಟ್‌ನ ಪಿ.ಟಿ. ಹನುಮಂತಪ್ಪ, ತಾಳೇದರ ಭೂಮೇಶಪ್ಪ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರವಿಕುಮಾರ್, ರಾಜಪ್ಪ, ಅಶೋಕ್, ಯೋಗೇಶ್, ವೀರೇಶ್, ಭೀಮಪ್ಪ, ನಲ್ಕುಂದ ಬಸಪ್ಪ, ಬಲ್ಲೂರ ಚಿಕ್ಕಪ್ಪ, ಕನಗನಹಳ್ಳಿ ಆನಂದ್, ಪರಸಪ್ಪ, ಹನುಮಂತಪ್ಪ, ಶಿಕ್ಷಕ ಮಾಂಬಾಡಿ ಚಿಕ್ಕಪ್ಪ, ಸೇರಿದಂತೆ ಹಲವಾರು ಗಣ್ಯರು, ಬಂಧುಗಳು ಶುಭ ಕೋರಿದರು.
ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ ಸಣ್ಣಪ್ಳ ಮನೆತನದ ಪರವಾಗಿ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.