ದಾವಣಗೆರೆ, ಮಾ.23- ರಾಗಿ ಖರೀದಿ ಕೇಂದ್ರ ತೆರೆಯುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಾಳೆ ದಿನಾಂಕ 24ರ ಶುಕ್ರವಾರ ನಗರದ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಮುಖಾಂತರ ಬಹಿರಂಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಎ.ಆರ್. ಕರಿಬಸಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ದಾವಣಗೆರೆ ತಾಲ್ಲೂಕಿನಲ್ಲಿಯೇ ರೈತರು ಮುಂಗಾರು 200 ಎಕರೆ, ಹಿಂಗಾರು 700 ಎಕರೆ, ಬೇಸಿಗೆ 100 ಎಕರೆ, ಒಟ್ಟು 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಿದ್ದಾರೆ. ಸರಾಸರಿ 3 ಸಾವಿರ ಟನ್ ಇಳುವರಿಯ ಅಂದಾಜು ನಿರೀಕ್ಷೆಯಿದೆ. ಜಿಲ್ಲೆಯ 6 ತಾಲ್ಲೂಕುಗಳಲ್ಲಿಯೂ ರೈತರು ರಾಗಿ ಬೆಳೆ ಬೆಳೆದಿದ್ದು, ಸಿರಿಧಾನ್ಯದಲ್ಲಿ ಪ್ರಧಾನ ಸ್ಥಾನ ಪಡೆದಿರುವ ರಾಗಿ ಬೆಳೆಯಲು ಪ್ರೋತ್ಸಾಹಿಸುವ ಸರ್ಕಾರ ಖರೀದಿ ಕೇಂದ್ರ ತೆರೆಯದೇ ಅಮಾಯಕ ರೈತರನ್ನು ಸಮಸ್ಯೆಗೆ ಸಿಲುಕಿಸುವ ಜೊತೆಗೆ ನಷ್ಟಕ್ಕೆ ಒಳಗಾಗುವಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಪಹಣಿ ನೀಡಲು 10 ರೂ.ಗಳಿದ್ದ ಶುಲ್ಕವನ್ನು ದಿಢೀರನೆ 25 ರೂ.ಗಳಿಗೆ ಹೆಚ್ಚಿಸಲಾಗಿದೆ. ಬಿಪಿಎಲ್ ಕಾರ್ಡ್ದಾರರಿಗೆ 75 ಯೂನಿಟ್ ಉಚಿತ ವಿದ್ಯುತ್ ಹಾಗೂ ವಾಹನ ಖರೀದಿಗೆ ಸಹಾಯಧನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಪರಿಶಿಷ್ಟ ಸಮುದಾಯಗಳಿಗೆ ಮಾತ್ರ ಸೀಮಿತ ಎಂಬಂತೆ 75 ಯೂನಿಟ್ ಉಚಿತ ವಿದ್ಯುತ್ ಹಾಗೂ ವಾಹನ ಖರೀದಿಗೆ 3.5 ಲಕ್ಷ ಸಬ್ಸಿಡಿ ನೀಡುತ್ತಿದ್ದಾರೆ. ಹಾಗಾಗಿ, ಎಲ್ಲಾ ಬಡವರಿಗೂ ಈ ಸೌಲಭ್ಯ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿ.ಸಿ ಮಂಜಪ್ಪ ಆಲೂರು, ಬಿ.ಹೆಚ್.ರೇವಣಸಿದ್ಧಪ್ಪ ಒಡೆಯರ್, ಬಿ.ಸಿ.ದೇವೇಂದ್ರಪ್ಪ, ಕೆಂಪಣ್ಣ ಇದ್ದರು.