ಸರ್ಕಾರದಿಂದ ಅತ್ಯುತ್ತಮ ಕೊಡುಗೆ ವಚನಾನಂದ ಶ್ರೀ ವಿಶ್ವಾಸ

ಸರ್ಕಾರದಿಂದ ಅತ್ಯುತ್ತಮ ಕೊಡುಗೆ ವಚನಾನಂದ ಶ್ರೀ ವಿಶ್ವಾಸ - Janathavaniಬೆಂಗಳೂರು, ಮಾ. 23 – ಹರಿಹರ ಪಂಚಮಸಾಲಿ ಪೀಠದ ಸತತ ಹೋರಾಟದ ಫಲವಾಗಿ ನಾಳೆ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಕೊಡುಗೆ ಘೋಷಣೆಯಾಗುವ ವಿಶ್ವಾಸವಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಹೇಳಿದ್ದಾರೆ.  

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎನ್ನುವುದರ ಹೋರಾಟದ ಹಿಂದೆ 3 ದಶಕಗಳ ಇತಿಹಾಸವಿದೆ ಎಂದರು.

ಹಂತ ಹಂತಗಳಲ್ಲಿ ನಡೆಸಿದ ಹೋರಾಟ ಅಂತಿಮ ಹಂತಕ್ಕೆ ಬಂದು ಸೇರಿದೆ. 2 ಡಿ ಹಾಗೂ 2 ಸಿ ಮೀಸಲಾತಿಯನ್ನು ಘೋಷಣೆ ಮಾಡಿದ್ದನ್ನು ನಾವು ಸ್ವಾಗತಿಸುವುದಾಗಲೀ ಅಥವಾ ತಿರಸ್ಕರಿಸುವುದಾಗಲೀ ಮಾಡಿರಲಿಲ್ಲ ಎಂದು ಹೇಳಿದರು.

ಈ ಘೋಷಣೆಯಲ್ಲಿ ಸ್ಪಷ್ಟತೆಯ ಅಗತ್ಯತೆಯನ್ನು ಒತ್ತಿ ಹೇಳಿದ್ದೇವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿಂದುಳಿದ ಆಯೋಗದ ಮಧ್ಯಂತರ ವರದಿಯನ್ನು ಪಡೆದುಕೊಂಡಿದೆ. ಮಧ್ಯಂತರ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎಂದರು. 

ಪ್ರವರ್ಗ ಯಾವುದಾರೂ ಇರಲಿ ಆದರೆ ನಮ್ಮ ಸಮುದಾಯಕ್ಕೆ ಮೀಸಲಾತಿ ದೊರೆಯುವುದು ಬಹಳ ಅಗತ್ಯ. ಅದಕ್ಕೆ ಬೇಕಾದಂತಹ ಪೂರಕ ವಾತಾವರಣ ಈಗ ಸಿದ್ದವಾಗಿದೆ. ಆಯೋಗದ ಮಧ್ಯಂತರ ವರದಿ ಹಾಗೂ ಇಂದಿನ ಹೈಕೋರ್ಟ್‍ನಲ್ಲಿನ ಪಿಐಎಲ್ ಕುರಿತ ತೀರ್ಪು ಬಹುದೊಡ್ಡ ಬೆಳವಣಿಗೆಗಳಾಗಿವೆ ಎಂದರು. 

error: Content is protected !!