ಶೋಷಿತರ ಸಂಕಲ್ಪ ಸಮಾವೇಶ

ದಾವಣಗೆರೆ, ಮಾ. 24- ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಬರುವ ಏಪ್ರಿಲ್ 2 ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ `ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಮತ್ತು ಸ್ವಾಭಿಮಾನದ ಸಂರಕ್ಷಣೆಗಾಗಿ’ ಶೋಷಿತರ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾ ಒಕ್ಕೂಟದ ಮುಖಂಡ ಕೆ.ಎಂ. ರಾಮಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಶೋಷಿತ ವರ್ಗಗಳ ಮುಖಂಡರಾದ ಜಿ. ಪರಮೇಶ್ವರ್, ಪ್ರಿಯಾಂಕ ಖರ್ಗೆ, ಹೆಚ್.ಸಿ. ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ಹೆಚ್. ಮುನಿಯಪ್ಪ, ಹೆಚ್.ಆಂಜನೇಯ, ಅಲ್ಪಸಂಖ್ಯಾತರ ಮುಖಂಡರು ಸೇರಿದಂತೆ ಮತ್ತಿತರರೆ ಗಣ್ಯರನ್ನು ಸಮಾವೇಶಕ್ಕೆ ಆಹ್ವಾನಿಸಲಾಗುವುದು ಎಂದರು.

ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಕರ್ನಾಟಕದ ರಾಜಕೀಯ ದಿಕ್ಕನ್ನೇ ಬದಲಾಯಿಸುವ ನಿಟ್ಟಿನಲ್ಲಿ ಶೋಷಿತ ಸಮುದಾಯಗಳ ಸಮಾವೇಶ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಕರ್ನಾಟಕದ ಸಂದರ್ಭದಲ್ಲಿ ಬಹುದೊಡ್ಡ ಸಮಾವೇಶ ಇದಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ್ದೇವೆ ಎಂದು ಹೇಳಿ ಮೂಗಿಗೆ ತುಪ್ಪ ಸವರಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾ ಒಕ್ಕೂಟದ ಅನಂತನಾಯಕ್, ಬಸವರಾಜನಾಯ್ಕ, ಹೆಚ್.ಬಿ. ಮಂಜಪ್ಪ, ಹಾಲೇಕಲ್ ಎಸ್.ಟಿ. ಅರವಿಂದ್, ಲಿಂಗರಾಜ್, ಫುಟ್ಬಾಲ್ ಗಿರೀಶ್, ಇಟ್ಟಿಗುಡಿ ಮಂಜುನಾಥ್, ಆದರ್ಶ ಯಲ್ಲಪ್ಪ, ಬಾಡಾ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!