ದಾವಣಗೆರೆ, ಮಾ. 23- ಇಲ್ಲಿನ ಶಾಮನೂರು ರಸ್ತೆಯ ಬಿಂದಾಸ್ ಬಾರ್ ಬಳಿ ಕುತ್ತಿಗೆ ಕೊಯ್ದು, ಕಲ್ಲು ಎತ್ತಿ ಹಾಕಿ ಯುವಕನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಹತ್ಯೆಗೀಡಾದ ಯುವಕನನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ 35 ವರ್ಷ ವಯಸ್ಸಿನ ಮಹಾಂತೇಶ್ ಪುಟ್ಟಪ್ಪ ಎಂದು ಗುರುತಿಸಲಾಗಿದೆ.
ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪತ್ನಿಯ ತವರು ಮನೆ ದಾವಣಗೆರೆಯ ಬುದ್ದ, ಬಸವ, ಭೀಮಾ ನಗರಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದು, ಅದರಂತೆ ಯುಗಾದಿ ಹಬ್ಬದ ದಿನದಂದು ದಾವಣಗೆರೆಗೆ ಬಂದಾಗ ಹತ್ಯೆಗೀಡಾಗಿದ್ದಾನೆ. ಈತ ಮದ್ಯ ವ್ಯಸನಿಯಾಗಿದ್ದ ಎಂದು ಹೇಳಲಾಗಿದೆ.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಜೇಬಿನಲ್ಲಿ ರೈಲ್ವೆ ಟಿಕೆಟ್ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.