`ಕಾಮಣ್ಣ ಮಕ್ಕಳೇ…. ಎಂದು ಕೂಗುವುದರಲ್ಲೂ ಸಂದೇಶವಿದೆ’

ಕಾಮದಹನ ನೆರವೇರಿಸಿದವರು `ಕಾಮಣ್ಣ ಮಕ್ಕಳೇ, ಕಳ್ಳ ಸೂಳೆ ಮಕ್ಕಳೇ, ಭೀಮಣ್ಣ ಮಕ್ಕಳೇ, ಬಿಟ್ಟಿ ಸೂಳೆ ಮಕ್ಕಳೇ…’ ಮುಂತಾಗಿ ಕೂಗಿ ಸಂಭ್ರಮಿಸಿದರು ಎಂದು ವರದಿಯಾಗಿದೆ. ಆದರೆ, ನಮ್ಮ ಬಾಲ್ಯದಲ್ಲಿ ಕಾಮದಹನಕಾರರು ಸಾಮಾನ್ಯವಾಗಿ ಹೇಳುತ್ತಾ ಇದ್ದದ್ದು `ಕಾಮಣ್ಣ ಮಕ್ಕಳೇ, ಕಳ್ಳ ಸುಳ್ಳ ಮಕ್ಕಳೇ, ಭೀಮಣ್ಣ ಮಕ್ಕಳೇ, ಭಿಕ್ಷೆ ಬೇಡೋ ಮಕ್ಕಳೇ, ಐದೇ ಕುಳ್ಳು, ಆರೇ ಕಟಿಗಿ, ಕೊಡತಂಕ ಬಿಡಲ್ಲೋ….’ ಮುಂತಾಗಿ ಕೂಗುತ್ತಿದ್ದರು. 

ಈ ಕಾಮದಹನ ಹಾಗೂ ಕೂಗುವುದು ಒಂದು ರೀತಿ ಜನಪದೀಯವಾಗಿ ಬಂದದ್ದಾಗಿದ್ದು, ಜಾನಪದರು  ನಿಸ್ಸಂಕೋಚವಾಗಿ ಅಭಿವ್ಯಕ್ತಿಸುತ್ತಿದ್ದರಾದರೂ ಅಶ್ಲೀಲ ಪದಗಳನ್ನು, ಬೈಗುಳಗಳನ್ನು ಧಾರಾಳವಾಗಿ ಬಳಸುತ್ತಿರಲಿಲ್ಲ. ಜಾನಪದ ಸಾಹಿತ್ಯವು ಎಷ್ಟು ವಾಚ್ಯವೋ, ಎಷ್ಟು ಸರಳವೋ ಒಮ್ಮೊಮ್ಮೆ ಅಷ್ಟೇ ಸೂಚ್ಯವೂ ಆಗಿರುತ್ತದೆ. `ಕಾಮಣ್ಣ ಮಕ್ಕಳೇ, ಕಳ್ಳ ಸುಳ್ಳ ಮಕ್ಕಳೇ’ ಎನ್ನುವಲ್ಲಿ `ಕಾಮ’ ಎನ್ನುವುದು ದೈಹಿಕ ಸಂಬಂಧವಷ್ಟೇ ಆಗಿರದೆ `ಬೇಕು ಬೇಕು’ ಎನ್ನುವ ಹಪಾಹಪಿಯನ್ನು ಸಂಕೇತಿಸುತ್ತದೆಯಾದರೆ, ಅದನ್ನು ಪಡೆದುಕೊಳ್ಳಲು ಕಳ್ಳತನಕ್ಕೂ ಹೇಸುವುದಿಲ್ಲ, ಸುಳ್ಳು ಹೇಳಲೂ ಹೇಸುವುದಿಲ್ಲ, ಹೀಗಾಗಿ ಕಾಮಿಗಳು ಕಳ್ಳ ಸುಳ್ಳ ಮಕ್ಕಳೆಂದು ಪರಿಭಾವಿಸಿದರೆ, `ಭೀಮಣ್ಣ ಮಕ್ಕಳೇ, ಭಿಕ್ಷೆ ಬೇಡೋ ಮಕ್ಕಳೇ’ ಎನ್ನುವಲ್ಲಿ ಭೀಮ ಎಂದರೆ ಪಾಂಡವರ ಭೀಮನಲ್ಲ, `ದೊಡ್ಡದು’, `ಮಹತ್ತು’ ಎಂಬರ್ಥದಲ್ಲಿ ಬೇಕಾದಷ್ಟು ಇದ್ದಾಗಿಯೂ ದುರಾಸೆಯಿಂದ ಕೈಚಾಚುವವರನ್ನು, ಕೈ ತುಂಬಾ ಸಂಬಳಾದಿಗಳು ಬಂದರೂ ಸಹ ಲಂಚಕ್ಕೆ, ಭ್ರಷ್ಟಾಚಾರಕ್ಕೆ ಕೈ ಚಾಚುವವರನ್ನು `ಭೀಮಣ್ಣ ಮಕ್ಕಳೇ,  ಭಿಕ್ಷೆ ಬೇಡೋ ಮಕ್ಕಳೇ’ ಎಂದು ಮೂದಲಿಸಿದಂತಿದೆ. `ಐದೇ  ಕುಳ್ಳು’ ಎಂದರೆ `ಕುರುಳು’,  `ಸಗಣಿಯ ಬೆರಣಿ’ ಇದು ಸುಡುವಂತದು, ಇಲ್ಲಿ ಐದು ಕುರುಳು ಎಂಬುವುದು ನಮ್ಮ ಪಂಚ ಜ್ಞಾನೇಂದ್ರಿಯಗಳ ಕಾಮವನ್ನು ಪ್ರತಿನಿಧಿಸುತ್ತದೆ. ಕಣ್ಣಿಗೆ ದೃಶ್ಯದ ಕಾಮ, ಕಿವಿಗೆ ಶಬ್ಧದ ಕಾಮ, ಮೂಗಿಗೆ ವಾಸನೆಯ ಕಾಮ, ನಾಲಗೆಗೆ ರುಚಿಯ ಕಾಮ ಹಾಗೂ ಚರ್ಮಕ್ಕೆ ಸ್ಪರ್ಶದ ಕಾಮ ಇವೇ ನಮ್ಮನ್ನು ಬೆಂಕಿಯಾಗಿಯೂ ಸುಡಬಹುದು. ಹಾಗೆಯೇ ಆರು ಕಟ್ಟಿಗೆ ಎಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಾದಿ ಇವೇ ನಮ್ಮನ್ನು ಕಟ್ಟಿಗೆಗಳಿಂದ ಬಡಿದಂತೆ ಬಡಿಯಬಹುದು. ಅಂತಹ ಐದು ಕುರುಳು, ಆರು ಕಟ್ಟಿಗೆ ನಮಗೆ ಕೊಡಿ, ಅದರಿಂದ ಆ ಕಾಮವನ್ನೇ ನಾವು ಸುಡುತ್ತೇವೆ ಎಂದು ಕೂಗಿ ಹೇಳುವುದು ಇದರ ತಾತ್ಪರ್ಯ ಎನ್ನಬಹುದು. ನಮ್ಮ ಬಾಲ್ಯದಲ್ಲಿ ಕಾಮಣ್ಣನ ಚಿತ್ರ ಪಟ ಅಂಟಿಸಿದ ಕೋಲು, ಹಣ ಹಾಕಿಸಿ ಕೊಳ್ಳುವ ಡಬ್ಬ ಹಿಡಿದು ಹಣ ಕೇಳಲು ಬರುತ್ತಿದ್ದ ಮಕ್ಕಳು ತಮ್ಮ ಆ ಕೂಗಿ ನಲ್ಲಿ `ಎಂಟಣೆ ರೊಕ್ಕ ಡಬ್ಬದಾಗಿಕ್ಕು, ಒಂದ್ ರೂಪಾಯಿ ರೊಕ್ಕ ಜೇಬಾಗಿಕ್ಕು’ ಎಂದೂ ಕೂಗುತ್ತಿದ್ದರು. ಇದು ಹಣದ ಕಾಮವು ಸಣ್ಣ ಮೊತ್ತವನ್ನು ಮಾತ್ರ ಲೆಕ್ಕಕ್ಕೆ ತೋರಿಸಿ, ದೊಡ್ಡ ಮೊತ್ತವನ್ನು ಗುಳುಂ ಮಾಡುವ ಪರಿಪಾಠದ ವಿಡಂಬನೆಯೂ ಆಗಿತ್ತು 


– ಎಚ್.ಬಿ.ಮಂಜುನಾಥ್, ಹಿರಿಯ ಪತ್ರಕರ್ತ

error: Content is protected !!