ಬಿಜೆಪಿಯಲ್ಲಿ ನಾಚಿಕೆಯ ಕೆಲಸ

ಮಾಡಾಳ್ ಸ್ಪಷ್ಟನೆ ಒಪ್ಪಲಾಗದು : ವಿಶ್ವನಾಥ್‌

ಬೆಂಗಳೂರು, ಮಾ. 8 – ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬೆಂಗಳೂರಿನಲ್ಲಿ ಇಲ್ಲದಿದ್ದರೂ ಪೊಲೀಸರು ಇಲ್ಲೆ ಹುಡುಕುತ್ತಿದ್ದಾರೆ. ಮೋದಿ ಡಿಜಿಟಲ್ ಇಂಡಿಯಾ ಅಂತಾರೆ, ಫೋನ್‌ ಪೇ ಎಲ್ಲಾ ಅಂತಾರೆ, ಹಾಗಿದ್ರೆ ಮನೆಯಲ್ಲಿ ಇಷ್ಟು ಹಣ ಎಲ್ಲಿಂದ ಬಂತು? ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಪರಿಷತ್ ಸದಸ್ಯ ಹೆಚ್. ವಿಶ್ವನಾಥ್  ಸ್ವಪಕ್ಷದ ಮೇಲೆ ಗುಡುಗಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ಬಿಜೆಪಿ ಪಕ್ಷದಲ್ಲಿ ನಾಚಿಕೆ ಉಂಟಾಗುವ   ಕೆಲಸವಾಗಿದೆ. ಪಕ್ಷ ನಿಮಗೆ ತಾಯಿ ಇದ್ದ ಹಾಗೇ ಅದಕ್ಕೆ ಮೋಸ ಮಾಡಬೇಡಿ ಎಂದರು.

ಯಾವ ರೀತಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಮಾಡಾಳ್ ಪ್ರಕರಣದಲ್ಲಿ ಗೊತ್ತಾಗುತ್ತದೆ. ಸರ್ಕಾರದ ವಕೀಲರು ಬರಲೇ ಇಲ್ಲ. ರಾಜ್ಯದ ವಿಷಯ ಪ್ರಮುಖವೇ ಹೊರತು ಪಾರ್ಟಿ ಅಲ್ಲ. ಬಿಜೆಪಿ ಶಾಸಕರ ಮನೆಯಲ್ಲಿ ಇಷ್ಟು ಹಣ ಇರುವ ಬಗ್ಗೆ ನೀಡಲಾಗಿರುವ ಸ್ಪಷ್ಟನೆಯನ್ನು ಒಪ್ಪಿಕೊಳ್ಳ ಲಾಗದು. ಸರ್ಕಾರ ಕೂಡ ಒಪ್ಪಿಕೊಳ್ಳಬಾರದು ಎಂದರು

ಮಾಡಾಳ್ ವಿರೂಪಾಕ್ಷ ಅವರೇ, ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ. ಇವರೆಲ್ಲ ಮೋದಿ ವಿರೋಧಿಗಳು. ಇಷ್ಟೆಲ್ಲ ಭ್ರಷ್ಟಾಚಾರವಾಗುತ್ತಿದ್ದರು ಮುಖ್ಯಮಂತ್ರಿಯವರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು. 

ಮಾಡಾಳ್ ವಿಷಯದಲ್ಲಿ ದೊಡ್ಡ ಪ್ರಹಸನ ನಡೆದಿದೆ. ಸರ್ಕಾರದ ಪರ ವಕೀಲರು ಜಾಮೀನು ವಿಚಾರಣೆ ವೇಳೆ ಇರಲಿಲ್ಲ. ಕಿರಿಯ ವಕೀಲರು ಬಂದಿದ್ದರೂ ಬಾಯಿ ಬಿಡಲಿಲ್ಲ.  ಲೋಕಾಯುಕ್ತದ ಇಬ್ಬರು ಅಧಿಕಾರಿಗಳನ್ನು ತುರ್ತಾಗಿ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಬೆಂಗಳೂರು ವಕೀಲರ ಸಂಘ ಪತ್ರ ಬರೆದಿದೆ ಎಂದು ವಿಶ್ವನಾಥ್ ಹೇಳಿದರು.

ಭ್ರಷ್ಟಾಚಾರದ ವಿಚಾರವಾಗಿ ನನಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಗೂ  ಜಗಳವಾಗಿತ್ತು, ನಾನೂ ಕೂಡಾ ಐವತ್ತು ವರ್ಷಗಳಿಂದ ರಾಜಕಾರಣ, ಆಡಳಿತದ ಭಾಗವಾಗಿದ್ದೇನೆ.ಬಿಜೆಪಿ ಶಾಸಕರ ಮನೆಯಲ್ಲಿ ಈ ಪ್ರಮಾಣದ ಹಣ ಸಿಕ್ಕಿರೋದು ಇದೇ ಮೊದಲು. ನಾನು ಅಡಿಕೆ ಬೆಳೆಗಾರ, ನಮ್ಮ ಮನೆಯಲ್ಲಿ ಹಣ ಇರುತ್ತೆ ಅಂತೆಲ್ಲಾ ವಿರೂಪಾಕ್ಷಪ್ಪ ಸಮಜಾಯಿಷಿ ಕೊಟ್ಟಿದ್ದಾರೆ. ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.

ಒಬ್ಬ ಅಪರಾಧಿ ಎಲ್ಲಿದ್ದಾನೆ ಅಂತಾ ಪೊಲೀಸರಿ ಗೆ ಗೊತ್ತಿರಲ್ವಾ? ಭ್ರಷ್ಟ ಶಾಸಕನನ್ನು ಮೆರವಣಿಗೆ ಮಾಡ್ತಾರೆ ಅಂದ್ರೆ ಪೊಲೀಸರು ಹೇಗೆ ಅವಕಾಶ ನೀಡಿದರು? ಎಂದು ತರಾಟೆಗೆ ತೆಗೆದುಕೊಂಡರು.

error: Content is protected !!