ಹರಿಹರದಲ್ಲಿ ಸಂಭ್ರಮದ ಹೋಳಿ ಸಂಭ್ರಮ

ಹರಿಹರದಲ್ಲಿ ಸಂಭ್ರಮದ ಹೋಳಿ ಸಂಭ್ರಮ

ಹರಿಹರ, ಮಾ. 8 – ನಗರದಲ್ಲಿ ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಿನ್ನೆ ತಡ ರಾತ್ರಿ ರತಿದೇವಿ ಕಾಮನಿಗೆ ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಬಗೆಯ ಪೂಜಾ ಕಾರ್ಯಗಳನ್ನು ಮಾಡಿ ಕುಳ್ಳು,ಕಟ್ಟಿಗೆ ಯಿಂದ ಕಾಮನ ದಹನ ಮಾಡಲಾಯಿತು.

ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಓಕುಳಿ ಆಟದಲ್ಲಿ ಯುವಕರು, ಯುವತಿಯರು, ವೃದ್ಧರು ತೊಡಗಿಸಿಕೊಂಡು ವಿವಿಧ ಬಣ್ಣಗಳನ್ನು ಎರಚಿ ಸಂಭ್ರಮಿಸಿದರು.

ನಗರದ ಹರಿಹರೇಶ್ವರ ದೇವಸ್ಥಾನ ಮುಂಭಾಗದಲ್ಲಿ, ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ, ಬಸವೇಶ್ವರ ವೃತ್ತದಲ್ಲಿ, ನಡವಲಪೇಟೆ, ಹೊಸಭರಂಪುರ, ಹರ್ಲಾಪುರ, ವಿದ್ಯಾನಗರ, ವಿಜಯ ನಗರ, ದೇವಸ್ಥಾನ ರಸ್ತೆ, ಹೈಸ್ಕೂಲ್ ಬಡಾವಣೆ, ಇಂದ್ರಾನಗರ,  ಕೇಶವನಗರ, ತುಂಗಭದ್ರಾ ಬಡಾವಣೆ ಸೇರಿದಂತೆ ನಗರದ ವಿವಿಧ ಬಡಾವಣೆಗಳ ಪ್ರಮುಖ ವೃತ್ತದಲ್ಲಿ ಡಿಜೆ ಸೌಂಡ್ ಸಿಸ್ಟಮ್ ಹಾಕಿಕೊಂಡು ಯುವಕರು, ಯುವತಿಯರು ಹಾಡಿನ ತಾಳಕ್ಕೆ ಹೆಜ್ಜೆಗಳನ್ನು ಹಾಕುತ್ತಾ ಕುಣಿದು ಕುಪ್ಪಳಿಸಿ ನಾ ಮುಂದೆ ತಾ ಮುಂದೆ ಎಂದು ಮಡಿಕೆಯನ್ನು ಒಡೆಯಲು ಪೈಪೋಟಿ ಮಾಡಿದ್ದು ನೋಡುಗರ ಕಣ್ಮನ ಸೆಳೆದವು.

ನಗರದ ನಡವಲಪೇಟೆ ಯುವಕ ಸಂಘದ ವತಿಯಿಂದ 61 ನೇ ಕಾಮಣ್ಣ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಹನಗವಾಡಿ ವೀರೇಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ನಗರಸಭೆ ಸದಸ್ಯರಾದ ವಿಜಯಕುಮಾರ್, ವಿರುಪಾಕ್ಷಪ್ಪ, ಅಶ್ವಿನಿ, ಶಂಕರ್ ಖಟಾವ್ಕರ್, ಹಿಂದೂ ಜಾಗರಣ ವೇದಿಕೆಯ ದಿನೇಶ್, ಬಸವನಗೌಡ ಮತ್ತಿತರರು ಉಪಸ್ಥಿತರಿದ್ದರು.

error: Content is protected !!