ದಾವಣಗೆರೆ, ಮಾ. 7- ಭಾರತ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಮಾರ್ಚ್ 9 ರಂದು ನಿವೇಶನ ರಹಿತರಿಂದ ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ.
ವಸತಿ ಇಲ್ಲದವರಿಗೆ ವಸತಿ ಒದಗಿಸಬೇಕು, ನಿವೇಶನ ಇಲ್ಲದವರಿಗೆ ನಿವೇಶನ ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ವಿಧಾನಸೌಧ ಚಲೋ ನಡೆಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು
ಅಂದು ಬೆಳಗ್ಗೆ 10.30 ಕ್ಕೆ ಬೃಹತ್ ಪ್ರತಿಭಟನೆ ಮೂಲಕ ಬೆಂಗಳೂರು ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕಿಗೆ ತೆರಳಿ ಧರಣಿ ನಡೆಸಲಾಗುವುದು. ನಗರ ಪ್ರದೇಶ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವ ಮತ್ತು ಮುಂದೆ ಅರ್ಜಿ ಸಲ್ಲಿಸುವ ಎಲ್ಲಾ ವಸತಿ ರಹಿತರಿಗೆ ನಿವೇಶನ ಮತ್ತು ವಸತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಸಿಪಿಐ ರಾಜ್ಯ ಸಮಿತಿ ನೇತೃತ್ವದಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆ ಜಿಲ್ಲೆಯ ಎಲ್ಲಾ ವಸತಿ ರಹಿತರು ಮತ್ತು ನಿವೇಶನ ರಹಿತರು ಮಾರ್ಚ್ 9 ರ ವಿಧಾನಸೌಧ ಚಲೋ ಹೋರಾಟದಲ್ಲಿ ಭಾಗವಹಿಸಬೇಕೆಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪಕ್ಷದ ಜಿಲ್ಲಾ ಸಹಕಾರ್ಯದರ್ಶಿಗಳಾದ ಕಾಂ. ಹೆಚ್.ಜಿ. ಉಮೇಶ್, ಕಾಂ. ಆವರಗೆರೆ ವಾಸು, ಖಜಾಂಚಿ ಕಾಂ.ಆನಂದರಾಜ್, ಮುಖಂಡರುಗಳಾದ ಕಾಂ. ಟಿ.ಎಸ್. ನಾಗರಾಜ, ಕಾಂ.ಎಂ.ಬಿ. ಶಾರದಮ್ಮ, ಕಾಂ. ಐರಣಿ ಚಂದ್ರು, ಕಾಂ. ಮಹಮ್ಮದ್ ಬಾಷಾ, ಕಾಂ. ಟಿ.ಹೆಚ್. ನಾಗರಾಜ್, ಕಾಂ. ಮಹಮ್ಮದ್ ರಫೀಕ್, ಕಾಂ. ಪಿ. ಷಣ್ಮುಖಸ್ವಾಮಿ ಮತ್ತಿತರರು ನೇತೃತ್ವ ವಹಿಸಲಿದ್ದಾರೆ.