ಚನ್ನಗಿರಿ, ಮಾ.4- ಹಳೆ ಶಿಲಾಯುಗದಷ್ಟು ಪುರಾತನವಾದ ಈ ನಮ್ಮ ಕನ್ನಡನಾಡು ಕವಿಗಳ, ದಾರ್ಶನಿಕರ, ಚಿಂತಕರ, ಮೇಧಾವಿಗಳ ಗೂಡು ಎಂದು ದಾವಣಗೆರೆ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಯುಗಧರ್ಮ ರಾಮಣ್ಣ ಹೇಳಿದರು.
ಹರನಹಳ್ಳಿ-ಕೆಂಗಾಪುರದಲ್ಲಿ ಶನಿವಾರ ಆರಂಭವಾದ 2 ದಿನಗಳ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡನಾಡು-ನುಡಿಯೇ ಚೈತನ್ಯದ ಜಲಪಾತವಾಗಿದ್ದು, ಸಾಹಸಿಗಳ ಪ್ರಸಿದ್ಧ ಸಾಧನೆಯಿಂದ ಮರೆಯಲಾಗದ ಮಹಾನ್ ಸಾಮ್ರಾಜ್ಯಗಳ ತಾಣದಿಂದಾಗಿ ಸಾಹಿತ್ಯ, ಸಂಸ್ಕೃತಿ, ಕಲೆಗಳ ಅಕ್ಷಯ ನಿಧಿಯಾದ ಕನ್ನಡ ನಾಡಿಗೆ ಅನನ್ಯವಾದ ಇತಿಹಾಸ-ಪರಂಪರೆ ಇರುವುದೇ ನಮಗೆ ಹೆಮ್ಮೆ ಎಂದರು.
ಈ ನಮ್ಮ ನಾಡಿಗೆ ಆಂಧ್ರಪ್ರದೇಶ ದಲ್ಲಿರುವ ಆದ ವಾನಿ, ಆಲೂರು, ರಾಯ ದುರ್ಗ, ಮಡಶಿಲಾ, ಕಲ್ಯಾಣ ದುರ್ಗ, ಹಿಂದೂಪುರ, ಮಹಾರಾಷ್ಟ್ರದಲ್ಲಿರುವ ಸೊಲ್ಲಾ ಪುರ, ಅಕ್ಕಲಕೋಟೆ, ಜತ್ತ, ನೆಲದುರ್ಗ, ಉದುರ್ಗ, ಮಂಗಳವೇಡೆ, ತಮಿಳುನಾಡಿನನಲ್ಲಿರುವ ನೀಲಗಿರಿ, ಗುಡಲೂರು, ಊಟಿ, ಕೊನೂರು, ಬೆರಂಗೂರು, ಹೊಸೂರು, ಕೃಷ್ಣಗಿರಿ, ಕೇರದಲ್ಲಿರುವ ಕಾಸರಗೋಡು, ವಯನಾಡು ಇವುಗಳು ನಮ್ಮ ಕನ್ನಡ ನಾಡಿಗೆ ಸೇರಿದಾಗ ಮಾತ್ರ ನಮ್ಮ ಕರ್ನಾಟಕವಾಗುವುದು. ಆದಷ್ಟು ಬೇಗ ಈ ಅಚ್ಚಗನ್ನಡ ಪ್ರದೇಶಗಳು ಕನ್ನಡ ನಾಡಿಗೆ ಸೇರುವಂತಾಗಲೆಂಬ ಹೆಬ್ಬಯಕೆ ಈ ಯುಗಧರ್ಮನದು ಎಂದು ರಾಮಣ್ಣ ಸರ್ಕಾರವನ್ನು ಒತ್ತಾಯಿಸಿದರು.
ನನ್ನಂಥ ದಡ್ಡನು ಬರೆದ ಸಾಹಿತ್ಯಕ್ಕೆ ನಾಡಿನಾದ್ಯಾಂತ ಸಂಚರಿಸಿ ಮತನಾಡಿದ ಮಾತಿಗೆ ಮಹತ್ವ ಕೊಟ್ಟು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷನನ್ನಾಗಿ ಮಾಡಿರುವುದಕ್ಕೆ ಕೋಟಿ, ಕೋಟಿ ನಮನಗಳನ್ನು ಅರ್ಪಿಸಿದ ರಾಮಣ್ಣ, ಈ ನಾಡು-ನುಡಿ, ವೈಶಿಷ್ಟ್ಯ, ಸಂಕಷ್ಟ-ಸಮಸ್ಯಗೆಳು, ಪರಿಹಾರೋಪಯಗಳನ್ನು ಈ ನನ್ನ ಪದ್ಯಗಳ ಮೂಲಕ ತಮ್ಮಗಳ ಹೃದಯಕ್ಕೆ ಸಮರ್ಪಿಸುತ್ತೇನೆಂದು ಕನ್ನಡ ನಾಡು-ನುಡಿ ಕುರಿತು ಲಾವಣಿ ಹಾಡೊಂದನ್ನು ಹಾಡಿ ಎಲ್ಲರ ಗಮನ ಸೆಳೆದರು.
ಮಧ್ಯಾಹ್ನದ ನಂತರ ಸಮ್ಮೇಳನದಲ್ಲಿ ಕೃಷಿ ಕ್ಷೇತ್ರದ ಪ್ರಸ್ತುತ ಸ್ಥಿತಿ-ಗತಿಗಳು ಕುರಿತಾದ ಗೋಷ್ಠಿ ಮತ್ತು `ಜಿಲ್ಲೆಯ ಪ್ರವಾಸೋದ್ಯಮ’ ಅಭಿವೃದ್ಧಿ ಕುರಿತು ವಿಶೇಷ ಉಪನ್ಯಾಸಗಳ ಜೊತೆಗೆ ಯುಗಧರ್ಮ ರಾಮಣ್ಣ ಅವರ ಬದುಕು ಬರಹ, ಕುರಿತು ವಿಶೇಷ ಉಪನ್ಯಾಸಗಳು ನಡೆದವು.