ದಾವಣಗೆರೆ, ಮಾ.2- ಮಾರ್ಚ್ 1 ರಂದು `ಶೂನ್ಯ ತಾರತಮ್ಯ ದಿನದ’ ಅಂಗವಾಗಿ ಅಮೃತ ವಿದ್ಯಾಲಯಂ ಹಾಗೂ ಅಮೃತ ಪದವಿ ಪೂರ್ವ ಕಾಲೇಜಿನಲ್ಲಿ `ಸಿವಿಲ್-20 ಐಕ್ಯಂ’ ಕಾರ್ಯಕ್ರಮ ನೆರವೇರಿಸಲಾಯಿತು.
ಜಿ-20 ಅಥವಾ ಗ್ರೂಪ್ ಆಫ್ ಟ್ವೆಂಟಿ, 19 ದೇಶಗಳು ಮತ್ತು ಯುರೋ ಪಿಯನ್ ಯೂನಿಯನ್ ಅನ್ನು ಒಳ ಗೊಂಡಿರುವ ಒಂದು ಅಂತರರಾಷ್ಟ್ರೀಯ ಸರ್ಕಾರಿ ವೇದಿಕೆ. ಇದು ಅಂತರರಾಷ್ಟ್ರೀಯ ಆರ್ಥಿಕ ಸ್ಥಿರತೆ, ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಜಿ-20 ಅಧ್ಯಕ್ಷರಾಗಿದ್ದರೆ, ಮಾತಾ ಅಮೃತಾನಂದಮಯಿ ಅಮ್ಮನವರು ಸಿವಿಲ್-20 ಅಧ್ಯಕ್ಷರಾಗಿದ್ದಾರೆ.
ಸಿ-20 ಇಂಡಿಯಾ 2023 ಜಿ-20ಯ ಅಧಿಕೃತ ಎಂಗೇಜ್ಮೆಂಟ್ ಗುಂಪುಗಳಲ್ಲಿ ಒಂದಾಗಿದೆ, ಇದು ವಿಶ್ವ ನಾಯಕರಿಗೆ ಜನರ ಆಕಾಂಕ್ಷೆಗಳನ್ನು ಧ್ವನಿಸಲು ಪ್ರಪಂಚದಾದ್ಯಂತ ನಾಗರಿಕ ಸಮಾಜ ಸಂಸ್ಥೆಗಳಿಗೆ ವೇದಿಕೆಯನ್ನು ಒದಗಿಸುತ್ತದೆ. ಅಲ್ಲದೇ ಸಮಾಜದಲ್ಲಿನ ಸಾಮಾನ್ಯ ಮತ್ತು ಅಂಗವಿಕಲರ ನಡುವಿನ ಅಸಮಾನತೆಯನ್ನು ತೊಡೆದು ಹಾಕುವಲ್ಲಿ ಶ್ರಮಿಸುತ್ತದೆ.
ಅಮೃತ ವಿದ್ಯಾಲಯಂ ಶಾಲೆಯ ಪ್ರಾಂಶುಪಾಲ ಎನ್. ಸಿ ವಿವೇಕ್ ರವರು ಬೀಜದ ಉಂಡೆಗಳ ತಯಾರಿಕೆ ಚಟುವಟಿಕೆಯ ಕುರಿತು ಆಶಾಕಿರಣ ಶಾಲೆಯ ಮಕ್ಕಳಿಗೆ ಮಾಹಿತಿ ನೀಡಿದರು. ಆಶಾಕಿರಣ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜೆ.ಡಿ.ಶಶಿಕಲಾ ಮತ್ತು ಸಹ ಶಿಕ್ಷಕ ರಾಜಶೇಖರ್ ಪಾಲ್ಗೊಂಡಿದ್ದರು.