81ರ ವಸಂತಕ್ಕೆ `ಬಿಜೆಪಿ ಸೋಮಣ್ಣ’

81ರ ವಸಂತಕ್ಕೆ `ಬಿಜೆಪಿ ಸೋಮಣ್ಣ' - Janathavaniದಾವಣಗೆರೆ ನಗರದಲ್ಲಿ ಬಿಜೆಪಿ ಹುಟ್ಟು ಹಾಕಿದವರಲ್ಲಿ   ಒಬ್ಬರಾಗಿ, ಪಕ್ಷದ ಅಭ್ಯುದಯಕ್ಕೆ ಶ್ರಮಿಸಿದ   ಹಿರಿಯರು ಹಾಗೂ ಸಾಮಾಜಿಕ ಸೇವಾ ಕಳಕಳಿಯ ವ್ಯಕ್ತಿ   ಜೆ. ಸೋಮನಾಥ್   ಅವರು  ಇಂದು  81ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ದಾವಣಗೆರೆಯಲ್ಲಿ ಬಿಜೆಪಿ ಎಂದಾಕ್ಷಣ ಇಂದಿಗೂ ಸೋಮಣ್ಣ ಹೆಸರು ಮುಂಚೂಣಿಯಲ್ಲಿ ಬರುತ್ತದೆ.  ಮೂರು ದಶಕಗಳ ಕಾಲ   ಪಕ್ಷದಲ್ಲಿ  ಗಣನೀಯ ಸೇವೆ  ಸಲ್ಲಿಸಿದ ಅವರು `ಬಿಜೆಪಿ ಸೋಮಣ್ಣ’ ಎಂದೇ ಹೆಸರಾಗಿದ್ದಾರೆ. 

3-03-1943ರಂದು ಷಡಾಕ್ಷರಯ್ಯ ಮತ್ತು ವೀರಮ್ಮ ದಂಪತಿಯ ಪುತ್ರರಾಗಿ  ಜನಿಸಿದ ಸೋಮಣ್ಣ, ಬಿಎಸ್ಸಿ ಪದವೀಧರರು. ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ವೃತ್ತಿ ಜೀವನ ಆರಂಭಿಸಿದ ಅವರು, ತಮ್ಮ ಬಾಳ ಸಂಗಾತಿ  ಶ್ರೀಮತಿ ಜೆ. ಶಾಂತಮ್ಮ ಅವರೊಂದಿಗೆ ತುಂಬು ಜೀವನ ಸಾಗಿಸಿದ್ದಾರೆ. 

   ಅನೇಕ ಸಂಘ – ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ  ತೊಡಗಿಸಿ ಕೊಂಡು ಸಾಮಾಜಿಕ ಮತ್ತು ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದಾರೆ.   ಜೆ.ಸಿ. ಅಧ್ಯಕ್ಷರಾಗಿ, ಯೂತ್ಸ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷರಾಗಿ ,              ಶ್ರೀ ಶಿವಯೋಗೀಶ್ವರ ಭಜನಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ವಿವಿಎಫ್ಎಸ್ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.    ರಾಜ್ಯ ಬಿಜೆಪಿ ಪರಿಷತ್ ಸದಸ್ಯರಾಗಿ, ನಗರ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 

ಅನ್ಯಾಯ, ಅಕ್ರಮಗಳ ವಿರುದ್ಧ ಸದಾ ಹೋರಾಟದ ಬದುಕನ್ನು ರೂಢಿಸಿಕೊಂಡಿರುವ   ಸೋಮಣ್ಣ, ಅನೇಕ ಪ್ರತಿಭಟನೆಗಳ ಸಂದರ್ಭಗಳಲ್ಲಿ ಸೆರೆಮನೆಗೂ ಹೋಗಿ ಬಂದಿದ್ದಾರೆ.  ಗೋಕಾಕ್ ವರದಿ ಜಾರಿಗಾಗಿ ನಡೆದ ಚಳವಳಿಯಲ್ಲಿ  ಸಕ್ರಿಯವಾಗಿ ಭಾಗವಹಿಸಿದ್ದರು.      ತಮ್ಮ ಈ ಇಳಿಯ ವಯಸ್ಸಿನಲ್ಲೂ ಉತ್ಸಾಹದಿಂದ ಸಮಾಜ ಸೇವೆಯಲ್ಲಿ   ತೊಡಗಿದ್ದಾರೆ.

ನಮ್ಮ ಸುಖ-ದುಃಖಗಳಿಗೆ ನಾವೇ ಜವಾಬ್ಧಾರರೇ ವಿನಃ ಮತ್ತಾರೂ ಅಲ್ಲ. ನಮ್ಮ ಭವಿಷ್ಯವನ್ನು ರೂಪಿಸಿಕೊ ಳ್ಳುವುದು ನಮ್ಮ ಕೈಯಲ್ಲಿಯೇ ಇದೆ ಎಂದು ತಮ್ಮ ಅನುಭವದ ಮಾತನ್ನು ಮೆಲುಕು ಹಾಕುವ ಸೋಮಣ್ಣ ಸೋತಾಗ ಕುಗ್ಗಲಿಲ್ಲ, ಗೆಲುವಿನಿಂದ ಹಿಗ್ಗಲಿಲ್ಲ. ಸಮಚಿತ್ತದಿಂದ, ಕ್ರಿಯಾಶೀಲವಾಗಿರುವುದೇ ಅವರ ಆರೋಗ್ಯ-ಭಾಗ್ಯದ ಗುಟ್ಟು ಎಂದರೂ ತಪ್ಪಾಗಲಾರದು.  ಅವರು ನೂರ್ಕಾಲ ಸುಖ-ಶಾಂತಿಯಿಂದ ಬಾಳುವಂತಾಗಲಿ ಎಂಬುದೇ ಈ ಶುಭದಿನದ ಹಾರೈಕೆ.

ಶಿವಕುಮಾರ್  

error: Content is protected !!