ಸರ್ಕಾರಿ ನೌಕರರಿಗೆ ಶೇ.17ರಷ್ಟು ವೇತನ ಹೆಚ್ಚಳ

ಹಳೆ ಪಿಂಚಣಿ ಸಮಿತಿ ಭರವಸೆ

ಅರ್ಧ ದಿನಕ್ಕೇ ಮುಷ್ಕರ ಮುಕ್ತಾಯ

ಬೆಂಗಳೂರು, ಮಾ. 1 – ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರವಾಗಿ ಶೇಕಡ 17 ರಷ್ಟು ವೇತನ ಹೆಚ್ಚಳ ಮಾಡಿ, ಆದೇಶ ಹೊರಡಿಸಲಾಗಿದೆ. 

ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರ ನೀಡಿದ್ದ ಲ್ಲದೆ, ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಹಳೇಯ ಪಿಂಚಣಿ ಯೋಜನೆಗೆ ಮರು ಜಾರಿ ಮಾಡುವ ಸಂಬಂಧ ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದೆ. 

ತಮ್ಮ ಬೇಡಿಕೆಗಳಿಗೆ ಸರ್ಕಾರ ಮಣಿಯುತ್ತಿದ್ದಂತೆ ನೌಕರರು ಮುಷ್ಕರವನ್ನು ಹಿಂದಕ್ಕೆ ಪಡೆದು, ಕೆಲಸಕ್ಕೆ ಹಾಜರಾಗುವ ತೀರ್ಮಾನ ಪ್ರಕಟಿಸಿದರು. ಬುಧವಾರದಿಂದ ಅನಿರ್ದಿಷ್ಟ ಅವಧಿಗೆ ಮುಷ್ಕರ ನಡೆಸುವುದಾಗಿ ನೌಕರರ ಸಂಘಟನೆ ತಿಳಿಸಿತ್ತು. ಆದರೆ, ಸರ್ಕಾರದ ಜೊತೆ ನಡೆಸಿದ ಸಂಧಾನಕ್ಕೆ ಸಮ್ಮತಿಸಿ, ಮುಷ್ಕರ ಆರಂಭಿಸಿದ ಗಂಟೆಗಳಲ್ಲೇ ಪ್ರತಿಭಟನೆ ನಿಲ್ಲಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಮ್ಮ ಸರ್ಕಾರಿ ನಿವಾಸದಲ್ಲಿ ಮುಷ್ಕರ ನಿರತ ಸಂಘದ ಪದಾಧಿಕಾರಿಗಳ ಜೊತೆ ಸುದೀರ್ಘ ಸಮಾಲೋಚನೆ ನಡೆಸಿ, ಎರಡು ಬೇಡಿಕೆಗಳನ್ನು ತಾತ್ಕಾಲಿಕವಾಗಿ ಈಡೇರಿಸುವ ತೀರ್ಮಾನ ಪ್ರಕಟಿಸುತ್ತಿದ್ದಂತೆ ನೌಕರರು ಮುಷ್ಕರದಿಂದ ಹಿಂದೆ ಸರಿದರು. 

ಮಾತುಕತೆಯ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು, ನೌಕರರಿಗೆ ಮಧ್ಯಂತರ ಪರಿಹಾರವಾಗಿ ಶೇಕಡ 17 ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದ್ದು, ತಕ್ಷಣದಿಂದಲೇ ಈ ಆದೇಶ ಹೊರತರಲಾಗುವುದು ಎಂದರು.

ಏಳನೇ ವೇತನ ಆಯೋಗವನ್ನು ಈಗಾಗಲೇ ನೇಮಿಸಲಾಗಿದೆ. ಅವರಿಂದ ವರದಿ ಪಡೆದು, ಶೀಘ್ರದಲ್ಲೇ ವೇತನ ಪರಿಷ್ಕರಣೆಗೆ ಪ್ರಯತ್ನ ನಡೆಯುತ್ತಿದೆ. ಈಗ ಮಧ್ಯಂತರ ಪರಿಹಾರ ಘೋಷಿಸಲು ತೀರ್ಮಾನ ಕೈಗೊಂಡಿದ್ದೇವೆ.  

ಹಳೆಯ ಪಿಂಚಣಿ ಪದ್ಧತಿ ಮರು ಜಾರಿಗೊಳಿಸಬೇಕೆಂಬ ಬೇಡಿಕೆಯನ್ನು ನೌಕರರ ಸಂಘ ಮುಂದಿಟ್ಟಿದ್ದು, ಈ ಕುರಿತು ಅಧ್ಯಯನ ನಡೆಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಹಳೇಯ ಪಿಂಚಣಿ ಪದ್ದತಿ ಕುರಿತು ಸಮಿತಿ ಅಧ್ಯಯನ ನಡೆಸಿ ವರದಿ ನೀಡಲಿದೆ. ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ಎರಡು ವಿಷಯಗಳಲ್ಲಿ ಸರ್ಕಾರ ಮತ್ತು ನೌಕರರ ಸಂಘ ಒಪ್ಪಂದಕ್ಕೆ ಬಂದಿವೆ. ಈ ಒಪ್ಪಂದದ ಅನ್ವಯ ಆದೇಶ ಹೊರಬೀಳಲಿದೆ ಎಂದು ಬೊಮ್ಮಾಯಿ ಹೇಳಿದರು.

ಸರ್ಕಾರದ ಘೋಷಣೆಯಾಗುತ್ತಿದ್ದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಸುದ್ದಿಗಾರರೊಂದಿಗೆ ಮಾತನಾಡಿ, ಮಧ್ಯಂತ ಪರಿಹಾರ ಹಾಗೂ ಹಳೆಯ ಪಿಂಚಣಿ ಪದ್ಧತೆ ಮರು ಜಾರಿ ಕುರಿತು ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ನೇಮಿಸಲು ಸರ್ಕಾರ ಆದೇಶ ಹೊರಡಿಸಿರುವುದರಿಂದ ಮುಷ್ಕರ ಅಂತ್ಯಗೊಳಿಸಿದ್ದೇವೆ ಎಂದು ಪ್ರಕಟಿಸಿದರು. 

ಶೇಕಡ 40 ರಷ್ಟು ವೇತನ ಹೆಚ್ಚಳ ಸೇರಿದಂತೆ ಎಲ್ಲಾ ಬೇಡಿಕೆಗಳು ಈಡೇರಬೇಕು. ಈಗ ತಾತ್ಕಾಲಿಕವಾಗಿ ಮುಷ್ಕರ ಸ್ಥಗಿತವಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ, ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

error: Content is protected !!