ಮಾಯಕೊಂಡ, ಫೆ.28- ಸಮೀಪದ ನೇರ್ಲಿಗೆ ಗ್ರಾಮದಲ್ಲಿ ಜುಂಜಪ್ಪನ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಮೊನ್ನೆ ಗ್ರಾಮ ದೇವತೆ ರಂಗನಾಥ ಸ್ವಾಮಿ ಸಮೇತ ತೆರಳಿ, ಶ್ರೀ ಜುಂಜೇಶ್ವರ ಸ್ವಾಮಿಗೆ ಹರಿಹರದ ತುಂಗಾಭದ್ರಾ ನದಿಯಲ್ಲಿ ಹೊಳೆಪೂಜೆ ನೆರವೇರಿಸಲಾಯಿತು. ಹೊಳೆ ಪೂಜೆಯಿಂದ ಆಗಮಿಸಿ, ಗ್ರಾಮ ಪ್ರವೇಶಿಸಿದ ದೇವರುಗಳ ಉತ್ಸವ ಮೂರ್ತಿಗಳನ್ನು ಊರ ದ್ವಾರ ಬಾಗಿಲಿನಿಂದ ಛತ್ರಿ, ಚಾಮರ, ಭಾಜ ಭಜಂತ್ರಿ, ಕಳಸಗಳೊಂದಿಗೆ ಐಗೂರು ಗ್ರಾಮದ ಗೊಲ್ಲರಹಟ್ಟಿಯ ಡ್ರಮ್ಸೆಟ್ ತಂಡದ ವಾದ್ಯದೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ಕರೆತರಲಾಯಿತು. ಜುಂಜೇಶ್ವರ ಸ್ವಾಮಿ ಮತ್ತು ರಂಗನಾಥ ಸ್ವಾಮಿಗಳನ್ನು ಜುಂಜೇಶ್ವರ ದೇವಾಲಯ ಆವರಣದಲ್ಲಿ ಕೂರಿಸಿ ಮಹಾ ಮಂಗಳಾರತಿ ನೆರವೇರಿಸಲಾಯಿತು.
ನಿನ್ನೆ ಬೆಳಿಗ್ಗೆ ದೇವಸ್ಥಾನದ ಆವರಣದಲ್ಲಿ ಅಗ್ನಿಕುಂಡ ನಿರ್ಮಿಸ ಲಾಯಿತು. ನೂರಾರು ಭಕ್ತರು ಬಿರುಬಿಸಿಲಿನಲ್ಲೂ ಕೆಂಡ ಹಾದು ಭಕ್ತಿ ಮೆರೆದರು. ಕೆಂಡಹಾದ ಬಳಿಕ ಜುಂಜೇಶ್ವರ ಸ್ವಾಮಿಗೆ ಎಲೆ ಪೂಜೆ ನೆರವೇರಿಸಲಾಯಿತು. ಸಂಜೆ ಬೆಲ್ಲದ ಬಂಡಿ ಮತ್ತು ಪಾನಕ ಬಂಡಿಗಳ ಮೆರವಣಿಗೆ ನಡೆಯಿತು. ಭಕ್ತರಿಗೆ ಪಾನಕ ವಿತರಿಸಲಾಯಿತು. ದೇವಸ್ಥಾನದ ಕಮಿಟಿ ವತಿಯಿಂದ ಮತ್ತು ಗ್ರಾಮಸ್ಥರಿಂದ ಇಂದು ಅನ್ನ ಸಂತರ್ಪಣೆ ನಡೆಯಿತು. ನೇರ್ಲಿಗೆ ಗೊಲ್ಲರಟ್ಟಿಯ ಈರಗಾರ್, ಗೌಡರು, ಪೂಜಾರಿಗಳು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಗೊಲ್ಲರಹಟ್ಟಿಯ ಕಟ್ಟೇಮನೆ ವಂಶಸ್ಥರು, ಜುಂಜೇಶ್ವರ ದೇವಸ್ಥಾನ ಸೇವಾ ಸಮಿತಿ ಜಾತ್ರೋತ್ಸವದ ಉಸ್ತುವಾರಿ ವಹಿಸಿದ್ದರು.