ಸಾಧನೆ.. ಸಾರ್ಥಕತೆ.. ಸಂಭ್ರಮ .. !

ಸಾಧನೆ.. ಸಾರ್ಥಕತೆ.. ಸಂಭ್ರಮ .. !

ದಾವಿ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಸ್ವರ್ಣ ಪದಕ ಸ್ವೀಕರಿಸಿದ ವಿದ್ಯಾರ್ಥಿಗಳು

ದಾವಣಗೆರೆ, ಫೆ. 28- ಕಷ್ಟಗಳ ನಡುವೆ ತೋರಿದ ಸಾಧನೆಯನ್ನು ಹೆತ್ತವರು ಸ್ನೇಹಿತರೊಂದಿಗೆ ಸಂಭ್ರಮಿಸುವ ಕ್ಷಣವದು. 

ಅವರೆಲ್ಲಾ ಓದಿನಲ್ಲಿ ಶ್ರಮವಹಿಸಿ ಶೈಕ್ಷಣಿಕ ಸಾಧನೆ ಮಾಡಿದವರು. ಚಿನ್ನದ ಪದಕಕ್ಕೆ ಪಾತ್ರರಾದವರು. 5, 3, 2, 1 ಪದಕ ಪಡೆದ ಸಾಧಕರಿವರು. 

ರಾಜ್ಯದ ರಾಜ್ಯಪಾಲರು ನೀಡಿದ ಚಿನ್ನದ ಪದಕಗಳನ್ನು ಕೊರಳಿಗೇರಿಸಿ ಸಂಭ್ರಮಿಸಿದರು. ಮಕ್ಕಳ ಸಾಧನೆ ನೋಡಲೆಂದೇ ಆಗಮಿಸಿದ್ದ ಪೋಷಕರಲ್ಲಿ ಸಂತಸ, ಸಾರ್ಥಕ ಭಾವ. ಪದಕ, ಪ್ರಮಾಣ ಪತ್ರಗಳನ್ನು ನೋಡಿ ಆನಂದಿಸಿದರು. ನಂತರ ಒಂದಿಷ್ಟು ಫೋಟೋ ಕ್ಲಿಕ್ಕಿಸಿಕೊಂಡರು.

ಸಾಧನೆಯ ಹಿಂದಿನ ದಾರಿಯನ್ನೊಮ್ಮ ನೆನೆದು ಈ ಸಂಭ್ರಮಕ್ಕೆ ಕಾರಣರಾದ, ಪ್ರೋತ್ಸಾಹಿಸಿದ ಹೆತ್ತವರು, ಪೋಷಕರು, ಗುರುಗಳನ್ನು ಸ್ಮರಿಸಿದ ಪದಕ ವಿಜೇತರು. 

ಒಂದೆಡೆ ಚಿನ್ನದ ಹಕ್ಕಿಗಳ ಕಲರವ. ಮತ್ತೊಂದೆಡೆ ಪಿಹೆಚ್‌ಡಿ ಪದವಿ ಕನಸು ನನಸಾಗಿಸಿಕೊಂಡವರು ಸಂಭ್ರಮ, ಇವರ ಮಧ್ಯೆ ತಮ್ಮ ಸಾಧನೆ, ಸೇವೆಯನ್ನು ಗುರುತಿಸಿ ವಿಶ್ವವಿದ್ಯಾಲಯಯಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದವರಲ್ಲಿ ಧನ್ಯತಾ ಭಾವ. 

ಹೀಗೆ ಹಲವರ ಕನಸು, ಸಾಧನೆ, ಸಂಭ್ರಮಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ 10ನೇ ಘಟಿಕೋತ್ಸವ ಸಾಕ್ಷಿಯಾಗಿತ್ತು.ಘಟಿಕೋತ್ಸವದಲ್ಲಿ 32 ಮಹಿಳೆಯರು, 13 ಪುರುಷರು ಸೇರಿ 45 ವಿದ್ಯಾರ್ಥಿಗಳು 81 ಸ್ವರ್ಣದ ಪದಕಗಳನ್ನು  ಹಂಚಿಕೊಂಡರು. 

ಅಜ್ಜಿಯ ಆಸರೆಯಲ್ಲಿ  ಪಂಚ ಪದಕ: ಮೂರು ವರ್ಷದವರಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆಸರೆಯಲ್ಲಿ ಬೆಳೆದ  ಹಾಲಮ್ಮ ಅತಿ ಹೆಚ್ಚು ಅಂದರೆ 5 ಚಿನ್ನದ ಪಕಗಳನ್ನು ಪಡೆದಿದ್ದರು. ಕಷ್ಟಪಟ್ಟರೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎಂಬ ಸಂದೇಶ ನೀಡಿದರು.

ಚನ್ನಗಿರಿ ತಾಲ್ಲೂಕು ವೆಂಕಟೇಶ್ವರ ಕ್ಯಾಂಪ್‌ನಲ್ಲಿ ವಾಸಿಸುತ್ತಿರುವ ಇವರ ತಂದೆ ಬಸಪ್ಪ ಕೂಲಿ ಕಾರ್ಮಿಕ. ಅಜ್ಜಿ ಶಂಭಮ್ಮ ಅಂಗನವಾಡಿ ಸಹಾಯಕಿ. ಮೂರು  ವರ್ಷವಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆಸರೆಯಲ್ಲಿ ಬೆಳೆದ ಹಾಲಮ್ಮ ಹೇಳಿದ್ದಿಷ್ಟು. `ನಾನು ಓದಿನ ಬಗ್ಗೆ ಏಕಾಗ್ರತೆ ವಹಿಸುತ್ತಿದ್ದೆ. ಪರೀಕ್ಷೆ ಒಂದು ತಿಂಗಳಿದ್ದಾಗ ಹೆಚ್ಚು ಶ್ರಮ ವಹಿಸುತ್ತಿದ್ದೆ. ಪಾಠಗಳ ಪುನಾವರ್ತನೆ ಮಾಡಿ ಕೊಳ್ಳುತ್ತಿದ್ದೆ ಇದು ಹೆಚ್ಚು ಅಂಕ ಪಡೆಯಲು ಸಹಕಾರಿಯಾಯಿತು.’

ಮುಂದೆ ಪಿಹೆಚ್‌ಡಿ ಪದವಿ  ಪಡೆಯುವ ಆಸೆ ಇದೆೆ. ಉಪನ್ಯಾಸಕಿಯಾಗಬಯಸಿದ್ದೇನೆ ಎಂದು ಹಾಲಮ್ಮ ಹೇಳಿದರು.  ಅಂದಹಾಗೆ ಮೊಮ್ಮಗಳು ಪದಕ ಪಡೆಯುವ ದಿನದಂದೇ ಅಜ್ಜಿಯ ಕೆಲಸದ ನಿವೃತ್ತಿಯ ದಿನವೂ ಆಗಿತ್ತು. 

ಐದು ಪದಕ  ಪಡೆದ ಅರುಣ್ : ಐದು ಸ್ವರ್ಣದ ಪದಕ ಪಡೆದ ಮತ್ತೊರ್ವ ಸಾಧಕ ಕೆ.ಅರುಣ್ ಶರ್ಮ.  ಬಿಎಸ್ಸಿ ಬಯೋ ಕೆಮಿಸ್ಟ್ರಿಯಲ್ಲಿ ಪಡೆದ ತನ್ನ ಐದೂ ಪದಕಗಳು ಹೆತ್ತವರು ಹಾಗೂ ಅಧ್ಯಾಪಕ ವೃಂದಕ್ಕೆ ಸಮರ್ಪಿಸುವುದಾಗಿ ಹೇಳಿದ ಇವರಿಗೆ ಪಿಹೆಚ್‌ಡಿ ಮಾಡಿ, ಸಂಶೋಧಕನಾಗುವ ಆಸೆ.  ಮೂರು ಪದಕ ನಿರೀಕ್ಷಿಸಿದ್ದೆ. ಐದು ಬಂದಿರುವುದು ಖುಷಿ ನೀಡಿದೆ ಎಂದು ಸಂತಸ ಹಂಚಿಕೊಂಡರು.

ಧನುಗೆ ಸಂಶೋಧಕಿಯಾಗುವ ಕನಸು: ಬಯೋಟೆಕ್ನಾಲಜಿಯಲ್ಲಿ ರ್ಯಾಂಕ್ ಪಡೆದು ಚಿನ್ನದ ಪದಕ ಪಡೆದ ಧನು ಎ.ಎಸ್, ಚನ್ನಗಿರಿ ತಾಲ್ಲೂಕಿನ ನಾಗಶೆಟ್ಟಿಹಳ್ಳಿಯವರು. ಈಗಾಗಲೇ  ಪಿಹೆಚ್‌ಡಿಗೆ ಜಾಯಿನ್ ಆಗಿದ್ದೇನೆ. ರಿಸರ್ಚ್ ಮಾಡಬೇಕಿದೆ. ಸಂಶೋಧಕಿಯಾಗುವ ಕನಸಿದೆ ಎಂದರು.

ಫ್ರೊಫೆಸರ್ ಆಗುವ ಕನಸಿನ ಜ್ಯೋತಿ: ಎಂ.ಎಸ್ಸಿ ಭೌತ ವಿಜ್ಞಾನ ವಿಷಯದಲ್ಲಿ 2 ಪದಕ ಪಡೆದವರು ಜ್ಯೋತಿ ಎಸ್.,  ಮುಂದೆ ಪ್ರೊಫೆಸರ್ ಆಗಿ ಒಳ್ಳೆಯ ಎಜುಕೇಷನ್ ಕೊಡಬೇಕು ಎಂದುಕೊಂಡಿದ್ದೇನೆ. ಎಲ್ಲರೂ ಭೌತಶಾಸ್ತ್ರ ಇಷ್ಟಪಡುವ ಹಾಗೆ ಮಾಡುತ್ತೇನೆ ಎಂದು ಹೇಳಿರು ಜ್ಯೋತಿ. 

ಅಪ್ಪ ಕೂಲಿ ಕೆಲಸ ಮಾಡುತ್ತಾರೆ. ಆವತ್ತಿನ ಪಾಠ ಅವತ್ತೇ ಓದಿ ಮುಗಿಸುತ್ತಿದ್ದೆ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿರಲಿಲ್ಲ ಎಂದು ಹೇಳಿದರು.

ನವೋದ್ಯಮ ಆರಂಭಿಸುವ ಆಸೆಯ ಛಾಯಾ: ತಂದೆ ಮೂರ್ತಪ್ಪ ತಾಯಿ ವಿನೋದ. ಮಾಯಕೊಂಡದಲ್ಲಿ ಒಂದು ಎಕರೆ ಹೊಲ ಇದೆ. ಮೂವರು ಹೆಣ್ಣು ಮಕ್ಕಳು. ಎಂಬಿಎನಲ್ಲಿ ಚಿನ್ನದ ಪದಕ ಪಡೆದಿದ್ದೇನೆ ಎಂದವರು ಛಾಯಾ.

ಸ್ಟಾರ್ಟ್ ಆಪ್ ಕಂಪನಿ ಮಾಡಬೇಕೆಂದಿದ್ದೇನೆ. ಗೋಲ್ಡ್ ಮೆಡಲ್ ಪಡೆಯುವ ಹಂಬಲ ಇಟ್ಟುಕೊಂಡೇ ಓದಿದೆ. ಪೋಷಕರು ಕಷ್ಟದಲ್ಲೂ ಸಹಕರಿಸಿದರು. ಖುಷಿಯಾಗಿದೆ ಎಂದರು ಛಾಯಾ. 

ನಿರೀಕ್ಷೆ ಇರದಿದ್ದರೂ ಒಲಿದ ಪದಕ:  ಸಯಿದಾ ಮುಸ್ಕಾನ್ ಉನ್ನೀಸಾ  ಎಂ.ಕಾಂ ಪದವಿಯಲ್ಲಿ ಮೊದಲ ರಾಂಕ್ ಪಡೆದು, ಬಂಗಾರದ ಪದಕ ಪಡೆದಿದ್ದರು. ಹರಿಹರದ ಇವರು, ಎಸ್‌ಜೆವಿಪಿ ಕಾಲೇಜಿನಲ್ಲಿ ಓದಿದ್ದರು.  ತಂದೆ ಬಿರ್ಲಾ ಫ್ಯಾಕ್ಟರಿ ನಿವೃತ್ತ ಕಾರ್ಮಿಕ, ತಾಯಿಗೃಹಿಣಿ, 

ನಾನು ರಾಂಕ್ ನಿರೀಕ್ಷಿಸಿರಲಿಲ್ಲ. ಆದರೆ ಕಷ್ಟ ಪಟ್ಟು ಓದುತ್ತಿದ್ದೆ. ಅದಕ್ಕೆ ಫಲ ಸಿಕ್ಕಿದೆ. ಖುಷಿಯಾಗಿದೆ. ಸದ್ಯ ಚಾರ್ಟಡ್ ಅಕೌಂಟ್ ಓದುತ್ತಿದ್ದೇನೆ ಎಂದರು.

ಹೀಗೆ ಹಲವಾರು ಕನಸುಗಳನ್ನು ಹೊತ್ತು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಪತ್ರಿಕೆಯೊಂದಿಗೆ ತಮ್ಮ ಸಂತಸ ಹಂಚಿಕೊಂಡರು.

error: Content is protected !!