ಮಲೇಬೆನ್ನೂರಿನಲ್ಲಿ ಉರುಸ್ : ಸೌಹಾರ್ದತೆ ಕಾಪಾಡಲು ಸಭೆಯಲ್ಲಿ ಸಿಪಿಐ ಗೌಡಪ್ಪ ಮನವಿ

ಮಲೇಬೆನ್ನೂರಿನಲ್ಲಿ ಉರುಸ್ : ಸೌಹಾರ್ದತೆ ಕಾಪಾಡಲು ಸಭೆಯಲ್ಲಿ ಸಿಪಿಐ ಗೌಡಪ್ಪ ಮನವಿ

ಮಲೇಬೆನ್ನೂರು, ಫೆ. 28 – ಸರ್ಕಾರ ರೂಪಿಸಿರುವ ಕಾನೂನು ನಿಯಮ ಪಾಲಿಸಿ ಸೌಹಾರ್ದತೆಯಿಂದ ಉರುಸ್ ಆಚರಣೆ ಮಾಡಬೇಕು, ಶಾಂತಿ  ಕದಡಿದರೆ ಶಿಸ್ತು ಕ್ರಮ ಅನಿವಾರ್ಯ ಎಂದು ಹರಿಹರ ಸಿಪಿಐ ಗೌಡಪ್ಪ ಗೌಡ ಖಡಕ್ಕಾಗಿ ಎಚ್ಚರಿಕೆ ನೀಡಿದರು. 

ಪಟ್ಟಣದಲ್ಲಿ ಮಾ.1 ರ ಬುಧವಾರ ಮತ್ತು 2 ರ ಗುರುವಾರ ಜರುಗಲಿರುವ ಪ್ರಸಿದ್ಧ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ಉರುಸ್ ಪ್ರಯುಕ್ತ ಸೋಮವಾರ ಸಂಜೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಸೌಹಾರ್ದ ಶಾಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ನಿಗದಿತ ಸಮಯ, ಮಾರ್ಗದಲ್ಲಿ ಮೆರವಣಿಗೆ ಮಾಡಿ, ಡಿಜೆ ಬಳಸುವಂತಿಲ್ಲ. ಆಯೋಜಕರು ವಾಹನ ಪಾರ್ಕಿಂಗ್  ವ್ಯವಸ್ಥೆಯನ್ನು ವಿದ್ಯುತ್ ದೀಪಗಳೊಂದಿಗೆ ಮಾಡಬೇಕು. ಖವ್ವಾಲಿ ಕಾರ್ಯಕ್ರಮವನ್ನು ನಿಗದಿತ ಸಮಯದೊಳಗೆ ನಡೆಸಬೇಕು. ಧಾರ್ಮಿಕ ಹಬ್ಬಗಳ ಆಚರಣೆ ವೇಳೆ ರಾಜಕೀಯಕ್ಕೆ ಅವಕಾಶ ನೀಡಬೇಡಿ ಎಂದರು.

ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್ ಮಾತನಾಡಿ, ಪಟ್ಟಣದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್   ಹಾವಳಿ ಹೆಚ್ಚಾಗಿದೆ. ಪರವಾನಗಿ ಪಡೆಯದೆ ಅಳವಡಿಸಿರುವ ಫ್ಲೆಕ್ಸ್ ಪೊಲೀಸ್ ರಕ್ಷಣೆಯಲ್ಲಿ ತೆರವು ಮಾಡಿಸುವುದಾಗಿ ತಿಳಿಸಿ, ಸರ್ಕಾರಿ ನೌಕರರ ಪ್ರತಿ ಭಟನೆಯ ನಡುವೆಯೂ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.

ಉಪ ತಹಶೀಲ್ದಾರ್ ಆರ್. ರವಿ ಮಾತನಾಡಿ, ಸಾಮೂಹಿಕ ಹಬ್ಬ, ಮೆರವಣಿಗೆ ನಡೆಸುವಾಗ  ಹೆಚ್ಚು ಸ್ವಯಂ ಸೇವಕರನ್ನು ನಿಯೋಜಿಸಿ ಎಂದು ಕಿವಿ ಮಾತು ಹೇಳಿದರು.

ನವ ಜವಾನ್ ಉರುಸ್ ಸಮಿತಿ ಅಧ್ಯಕ್ಷ ಖಾದರ್ ಬಾಷಾ, ಮುಖಂಡರಾದ ಸೈಯದ್ ಜಾಕೀರ್, ಎಂ ಬಿ ಫೈಜು, ಪುರಸಭೆ ಸದಸ್ಯರಾದ ನಯಾಜ್, ಬೆಣ್ಣೆಹಳ್ಳಿ ಸಿದ್ದೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿ ಕುಮಾರ್, ಪುರಸಭೆ ಮಾಜಿ ಸದಸ್ಯರಾದ ಯೂಸುಫ್,ಭಾನುವಳ್ಳಿ  ಸುರೇಶ್, ದಾದಾವಲಿ ಮಾತನಾಡಿದರು.

ಪುರಸಭೆ ಸದಸ್ಯರಾದ ಭೋವಿ ಶಿವು, ಸಾಬೀರ್ ಅಲಿ, ಟಿ.ಹನುಮಂತಪ್ಪ, ದಾದಾಪೀರ್, ಪಿ.ಆರ್ ರಾಜು, ಖುದ್ದಸ್ ಸಾಬ್, ಚಮನ್ ಷಾ ,ಪಾಳೆಗಾರ್ ನಾಗರಾಜ್, ಓ.ಜಿ ಕುಮಾರ್, ನರಸಿಂಹಪ್ಪ ಮತ್ತಿತರರು ಸಭೆಯಲ್ಲಿದ್ದರು.

ಪಿಎಸ್ಐ ಪ್ರಭು ಕೆಳಗಿನಮನೆ ಸ್ವಾಗತಿಸಿದರು.

error: Content is protected !!