ಅಸಂಘಟಿತರಿಗೆ ಸರ್ಕಾರಿ ಸೌಲಭ್ಯ ಒದಗಿಸುವ ಭರವಸೆ
ದಾವಣಗೆರೆ, ಫೆ. 21 – ಬದಲಾಗುವ ತಂತ್ರಜ್ಞಾನದ ಜೊತೆ ಕೌಶಲ್ಯ ರೂಢಿಸಿಕೊಂಡಲ್ಲಿ, ಏನೇ ಸಮಸ್ಯೆ ಎದುರಾದರೂ ಚಾಕಚಕ್ಯತೆಯಿಂದ ಎದುರಿಸುವ ಸಾಮರ್ಥ್ಯ ಸಿಗುತ್ತದೆ ಎಂದು ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ವೈ. ಪ್ರಕಾಶ್ ತಿಳಿಸಿದರು.
ನಗರದ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಕಲ್ಚರಲ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ವೃತ್ತಿಪರ ಛಾಯಾಗ್ರಾಹಕ ಸಂಘಟನೆಗಳ ಒಕ್ಕೂಟದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಛಾಯಾಗ್ರಾಹಕರು ಸಮಾಜದ ಓರೆ ಕೋರೆಗಳನ್ನು ಪ್ರತಿಬಿಂಬವಾಗಿ ತೋರಿಸುತ್ತಾರೆ. ಕೊರೊನಾ ಸಮಯದಲ್ಲಿ ಎಡರು ತೊಡರುಗಳು ಎದುರಾದರೂ, ನಂತರ ಈ ವಲಯ ಚೇತರಿಸಿಕೊಂಡಿದೆ ಎಂದು ಹೇಳಿದರು.
ಸ್ಟುಡಿಯೋ, ವನ್ಯಜೀವಿ, ವೃತ್ತಿಪರ ಛಾಯಾಗ್ರಹಣ, ಮಾಧ್ಯಮ ಸೇರಿದಂತೆ ಹಲವಾರು ವಲಯಗಳಲ್ಲಿ ಛಾಯಾಗ್ರಾಹಕರಿಗೆ ಅವಕಾಶಗಳಿವೆ ಎಂದವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ವೃತ್ತಿಪರ ಛಾಯಾಗ್ರಾಹಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್, ಛಾಯಾಗ್ರಾಹಕರ ಸಮಸ್ಯೆಗಳಿಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಛಾಯಾಗ್ರಾಹಕರಿಗೆ ಅಸಂಘಟಿತ ವಲಯದ ಸೌಲಭ್ಯಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಛಾಯಾಗ್ರಾಹಕರಿಗೆ ನೆರವಾಗಲು ಒಕ್ಕೂಟ ಸ್ಥಾಪಿಸಲಾಗಿದೆ ಎಂದರು.
ವೇದಿಕೆಯ ಮೇಲೆ ಒಕ್ಕೂಟದ ಉಪಾಧ್ಯಕ್ಷರಾದ ಕೆ. ರಾಮಣ್ಣ, ಶ್ರೀಧರ್, ಖಜಾಂಚಿ ಚಂದ್ರಶೇಖರಯ್ಯ ಹಿರೇಮಠ್ ಮತ್ತಿತರರು ಉಪಸ್ಥಿತರಿದ್ದರು.
ಸುಧ ಹಾಗೂ ವಿಮಲ ಪ್ರಾರ್ಥಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆ.ಜಿ. ವಿಜಯಕುಮಾರ್ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ಎಸ್. ಬಾಬು ನಿರೂಪಿಸಿದರು.