ದಾವಣಗೆರೆ, ಫೆ.18- ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಬಹಳ ಶಿಥಿಲಗೊಂಡಿದ್ದು, ಕಟ್ಟಡದ ಅಭಿವೃದ್ಧಿ ಪಡಿಸಲು ಅಂದಾಜು ವೆಚ್ಚದ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಎನ್.ದುರ್ಗಾ ಶ್ರೀ ಅವರು ಕುರುಬ ಸಮುದಾಯದವರಿಗೆ ಆಶ್ವಾಸನೆ ನೀಡಿದರು.
ಅವರು ಇಂದು ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ತಮ್ಮ ಪತಿ ಪದ್ಮನಾಭ ಮತ್ತು ಪುತ್ರನೊಂದಿಗೆ ಭೇಟಿ ನೀಡಿ, ಶ್ರೀ ಮಹಾಶಿವರಾತ್ರಿ ಪರ್ವದ ಅಂಗವಾಗಿ ಜರುಗಿದ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಶೇಷ ಪೂಜೆ ನೆರವೇರಿಸಿ ಮಾತನಾಡಿದರು.
ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಜಾಗದ ತಕರಾರು ಇದ್ದು, ಅದು ನ್ಯಾಯಾಲಯದಲ್ಲಿದೆ. ಆದರೆ, ದೇವಸ್ಥಾನದ ಬಗ್ಗೆ ಯಾವುದೇ ರೀತಿಯ ತಕರಾರು ಇಲ್ಲ ಮತ್ತು ಇದು ರಾಜ್ಯದ ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಸರ್ಕಾರವೇ ಅನುದಾನ ಬಿಡುಗಡೆ ಮಾಡಿ, ಅಭಿವೃದ್ಧಿ ಪಡಿಸಬೇಕು ಎಂದು ಕುರುಬ ಸಮುದಾಯದ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕುರುಬ ಸಮುದಾಯದ ಮುಖಂಡರಾದ ಜೆ.ಕೆ. ಕೊಟ್ರಬಸಪ್ಪ, ಬಿ.ಎಂ.ಸತೀಶ್, ಹೆಚ್.ಜಿ.ಸಂಗಪ್ಪ, ಹೆಚ್.ಬಿ.ಗೋಣೇಪ್ಪ, ಎಸ್.ಎಸ್.ಗಿರೀಶ್, ಕನ್ನವರ ರೇವಣ್ಣ, ಕೆ.ಪರಶುರಾಮ, ಸಲ್ಲಳ್ಳಿ ಹನುಮಂತಪ್ಪ, ನವೀನ್, ಬಿ.ಹೆಚ್.ಪರಶುರಾಮಪ್ಪ ಮುಂತಾದವರು ಉಪಸ್ಥಿತರಿದ್ದರು.