ದಾವಣಗೆರೆ, ಫೆ.19- ಪಿಡಬ್ಲ್ಯೂಡಿ ಇಲಾಖೆಯ ನಾಲ್ವರು ಅಧಿಕಾರಿಗಳ ಮೇಲೆ ಲೋಕಾಯುಕ್ತರು ಎಫ್‌ಐಆರ್ ದಾಖಲಿಸಿದ್ದು, ಶ್ರೀರಾಮ ಸೇನೆಯ ಹೋರಾಟಕ್ಕೆ ಸಂದ ಜಯ ಎಂದು ಸೇನೆಯ ಜಿಲ್ಲಾಧ್ಯಕ್ಷ ಕೆ.ಮಣಿ ಸರ್ಕಾರ್ ಹೇಳಿದ್ದಾರೆ
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವ ಹೋರಾಟದ ಜೊತೆಗೆ ಶ್ರೀರಾಮ ಸೇನೆಯು ಭ್ರಷ್ಟಾಚಾರದ ವಿರುದ್ಧವೂ ಹೋರಾಟ ನಡೆಸುತ್ತಿದೆ. ಸೇನೆಯ ಹೋರಾಟದ ಫಲವಾಗಿ ಅನೇಕ ಅಧಿಕಾರಿಗಳ ಮೇಲೆ ಕೇಸುಗಳು ದಾಖಲಾಗಿವೆ ಎಂದು ಹೇಳಿದರು.
ಇದೀಗ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಕಚೇರಿಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರ ನರೇಂದ್ರ ಬಾಬು, ಅವರ ಸಹಾಯಕ ಇಂಜಿನಿಯರ್ ವೀರಪ್ಪ ಸಮಕ್ಷಮ ದಲ್ಲಿ ತಮ್ಮ ಕಚೇರಿಯಿಂದ ಮಂಜೂರಾದ ಕಾಮಗಾರಿ ಹಣವನ್ನು ಗುತ್ತಿಗೆದಾರರಿಗೆ ಬಿಡು ಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ಶ್ರೀರಾಮ ಸೇನೆಯಿಂದ ಕುಟುಕು ಕಾರ್ಯಾಚರಣೆ ನಡೆಸಿದ್ದು, ಒಂದೊಂದು ಕಡತಕ್ಕೂ 20 ಸಾವಿರ ರೂ. ಕೊಟ್ಟರೆ ಹಣ ಬಿಡುಗಡೆ ಮಾಡುವುದಾಗಿ ಸಹಾಯಕ ಇಂಜಿನಿಯರ್ ವೀರಪ್ಪ ಹೇಳಿರುವುದು ಹಾಗೂ ನಾನು ಈ ಸ್ಥಳಕ್ಕೆ 25 ಲಕ್ಷ ರೂ. ಕೊಟ್ಟು ಬಂದಿದ್ದೇನೆ ಎಂದು ಹೇಳಿರುವ ಆಡಿಯೋ ಹಾಗೂ ವೀಡಿಯೋ ರೆಕಾರ್ಡ್ ಮಾಡಿ, ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು ಎಂದರು.
ಅಧಿಕಾರಿಗಳಾದ ಎಇಇ ನರೇಂದ್ರಬಾಬು, ಎಇ ವೀರಪ್ಪ, ಇಇ ವಿಜಯಕುಮಾರ್ ಹಾಗೂ ಎಸ್.ಇ. ಜಗದೀಶ್ ಇವರನ್ನು ಸಂಬಂಧಿಸಿದ ಇಲಾಖೆ ಸಚಿವರು, ಮುಖ್ಯಮಂತ್ರಿಗಳೂ ಕೂಡಲೇ ಅಮಾನತ್ತು ಮಾಡಬೇಕು
ಹಾಗೂ ಈ ಸ್ಥಳಕ್ಕೆ ಬರಲು 25 ಲಕ್ಷ ರೂ.ಗಳನ್ನು ಕೊಟ್ಟಿರವುದಾಗಿ ವೀರಪ್ಪ ಹೇಳಿದ್ದು, ಯಾರಿಗೆ ಕೊಟ್ಟಿದ್ದಾರೆ? ಎಂಬ ಬಗ್ಗೆ ತನಿಖೆಯಾಗಬೇಕು ಒಂದು ಮಣಿ ಸರ್ಕಾರ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಗರ್, ಶ್ರೀಧರ್, ರಾಹುಲ್, ರಾಜು, ವಿನಾಯಕ, ರಮೇಶ್, ರಘು, ವಿನೋದ್ ಇತರರು ಉಪಸ್ಥಿತರಿದ್ದರು.