ದಾವಣಗೆರೆ, ಫೆ.19- ಉಪವಾಸ, ಪೂಜೆ ಮತ್ತು ಜಾಗರಣೆ ಇವು ತ್ರಿವಿಧಗಳಿಂದ ಕೂಡಿದ ಮೂರು ಅಂಗಗಳು ಮಹಾಶಿವರಾತ್ರಿಯ ವಿಶೇಷತೆಗಳಾಗಿವೆ. ಮಾಘ ಮಾಸ ಕೃಷ್ಣ ಪಕ್ಷ ಚತುರ್ದಶಿಯ ಉತ್ತರಾಯಣ ಪುಣ್ಯಕಾಲದಲ್ಲಿ ಜಗತ್ತಿನಾದ್ಯಂತ ಆಚರಿಸಲ್ಪಡುವ ಮಹಾಶಿವರಾತ್ರಿಯು ಶಿವಭಕ್ತರ ಪಾಲಿಗೆ ಮಂಗಳಕರವಾದ ದಿನವಾಗಿದೆ ಎಂದು ಯೋಗ ಗುರು ರಾಘವೇಂದ್ರ ಗುರೂಜಿ ಹೇಳಿದರು.
ಮಹಾಶಿವರಾತ್ರಿಯ ಪ್ರಯುಕ್ತ ನಗರದ ಆದರ್ಶ ಯೋಗ ಪ್ರತಿಷ್ಠಾನ, ಶ್ರೀ ಮಹಾಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ `ಶಿವ ಮಾನಸ ಧ್ಯಾನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಾಶಿವರಾತ್ರಿಯ ದಿನ ಶಿವ ತತ್ವವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶಿವ ತತ್ವದ ಲಾಭವು ಹೆಚ್ಚಿನ ಪ್ರಮಾಣದಲ್ಲಿ ಸಿಗಲು ಈ ದಿನ ಭಾವಪೂರ್ಣವಾಗಿ ಶ್ರದ್ಧಾಭಕ್ತಿಯಿಂದ ಶಿವನ ಪೂಜೆ, ಅರ್ಚನೆ ಮಾಡಬೇಕು ಮತ್ತು `ಓಂ ನಮಃ ಶಿವಾಯಃ’ ಎಂಬ ಶಿವ ಪಂಚಾಕ್ಷರಿ ನಾಮ ಜಪವನ್ನು ಹೆಚ್ಚು ಮಾಡಬೇಕು. ಹೀಗೆ ಮಾಡುವುದರಿಂದ ಶಿವನ ಸೂಕ್ಷ್ಮಶಕ್ತಿಯು ನಮಗೆ ಲಭಿಸುತ್ತದೆ. ಶರೀರದ ಆವಯವಗಳು ಚೈತನ್ಯಗೊಂಡು ಮನಸ್ಸು ಪ್ರಫುಲ್ಲಗೊಳ್ಳುವುದು.
ಶಿವರಾತ್ರಿಯಂದು ಉಪವಾಸ, ಜಾಗರಣೆ ಮತ್ತು ಪೂಜೆ ಇವುಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸುವುದು ಅತ್ಯಂತ ಶ್ರೇಷ್ಠವಾದುದು. ಜಾಗೃತವಾದ ಮನಸ್ಸಿನಿಂದ ಸದಾಶಿವನ ನಾಮಸ್ಮರಣೆಯೊಂದಿಗೆ ಶಿವನ ಸಾನ್ನಿಧ್ಯದಲ್ಲಿ ಸಾಮೀಪ್ಯವವನ್ನು ಹೊಂದಿ ಭಕ್ತಿಭಾವದಿಂದ ಬಿಲ್ವಪತ್ರೆ ಅರ್ಚನೆ, ಭಜನೆ, ಕೀರ್ತನೆ, ಸಂಗೀತವನ್ನು ಆಲಿಸುತ್ತಾ ರಾತ್ರಿ ಕಳೆದು, ಬೆಳಗಿನ ಜಾವದವರೆಗೆ ಸರ್ವಾಂತರ್ಯಾಮಿ ಮಹಾಯೋಗಿ ಈಶ್ವರನನ್ನು ಆರಾಧಿಸುವುದು ಈ ಮಹಾಶಿವರಾತ್ರಿಯ ವಿಶೇಷತೆಯಾಗಿದೆ ಎಂದು ಶಿವರಾತ್ರಿಯ ಮಹಿಮೆಯನ್ನು ತಿಳಿಸಿದರು.
ನಂತರ ‘ಶಿವಮಾನಸ ಧ್ಯಾನ’ದ ಅಭ್ಯಾಸವನ್ನು ಶ್ರೀ ಗುರೂಜಿಯವರು ಹೇಳಿಕೊಟ್ಟರು.
ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್ ವಿಶ್ವನಾಥಯ್ಯ ಕೆ.ಎಂ., ಅಂಚೆ ಇಲಾಖೆಯ ಶ್ರೀಮತಿ ವೇದಾವತಿ, ಸಮಾಜ ಕಲ್ಯಾಣ ಇಲಾಖೆಯ ಸಂತೋಷ್ ಹೆಚ್. ಮತ್ತು ಭರತ್ ವಡೋನಿ, ಗುರುಪ್ರಸಾದ್ ಎಸ್., ಶ್ರೀಮತಿ ಶ್ರೀದೇವಿ, ಕು. ಭ್ರಮರಾಂಭಿಕ ಇನ್ನಿತರರು ಭಾಗವಹಿಸಿದ್ದರು.