ಹಾಸನ, ಫೆ. 19 – ಆನ್ಲೈನ್ನಲ್ಲಿ ಮೊಬೈಲ್ಗೆ ಬುಕಿಂಗ್ ಮಾಡಿ, ಮೊಬೈಲ್ ಕೊಡಲು ಬಂದ ಡೆಲಿವರಿ ಬಾಯ್ನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಅರಸೀಕೆರೆ ನಗರದಲ್ಲಿ ನಡೆದಿದೆ. ಫೆಬ್ರವರಿ 7ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇ-ಕಾರ್ಟ್ ಎಕ್ಸ್ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್ ನಾಯ್ಕ್ ಎಂಬುವವರು ಹತ್ಯೆಗೀಡಾದ ವ್ಯಕ್ತಿ. 20 ವರ್ಷದ ಹೇಮಂತ್ ದತ್ತ ಎಂಬ ವ್ಯಕ್ತಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೇಮಂತ್ ದತ್ತ ಆನ್ಲೈನ್ನಲ್ಲಿ ಸೆಕೆಂಡ್ ಹ್ಯಾಂಡ್ ಆಪಲ್ ಫೋನ್ ಬುಕ್ ಮಾಡಿದ್ದ, ಆದರೆ ಆತನ ಬಳಿ ಹಣ ಇರಲಿಲ್ಲ. ಈ ಮೊಬೈಲ್ ತಲುಪಿಸಲು ಹೇಮಂತ್ ನಾಯ್ಕ್ ಅವರು ದತ್ತ ಮನೆಗೆ ತೆರಳಿದ್ದರು. ಹಣ ತರುವುದಾಗಿ ಹೇಳಿದ್ದ ದತ್ತ, ಹಿಂದಿನಿಂದ ಬಂದು ನಾಯ್ಕ್ಗೆ ಚಾಕುವಿನಿಂದ ಇರಿದಿದ್ದ. ನಾಯ್ಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೂರು ದಿನ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಆರೋಪಿ, ಫೆ.11ರಂದು ಮೃತದೇಹವನ್ನು ಸ್ಕೂಟಿಯಲ್ಲಿ ತೆಗೆದುಕೊಂಡು ಹೋಗಿ ಹೊರ ವಲಯದ ರೈಲ್ವೆ ಸೇತುವೆ ಸಮೀಪ ಸುಟ್ಟಿದ್ದನು.