ದಾವಣಗೆರೆ, ಫೆ. 16 – ಬಿ.ಎಸ್.ಎನ್.ಎಲ್. ವರ್ಷಾಂತ್ಯದ ವೇಳೆಗೆ 4ಜಿ ಸೇವೆ ವ್ಯಾಪಕವಾಗಿ ಆರಂಭಿಸಲಿದೆ. 5ಜಿ ಸ್ಪೆಕ್ಟ್ರಮ್ ದೊರಕಿದ ತಕ್ಷಣವೇ ಆ ಸೇವೆಯನ್ನೂ ಆರಂಭಿಸಲು ಸಿದ್ಧತೆ ನಡೆದಿದೆ ಎಂದು ಚಿತ್ರದುರ್ಗ – ದಾವಣಗೆರೆ ಟೆಲಿಕಾಂ ಜಿಲ್ಲೆಯ ಪ್ರಧಾನ ವ್ಯವಸ್ಥಾಪಕ ಡಿ.ಎಂ. ತ್ರಿಪಾಠಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 4ಜಿ ಹಾಗೂ 5ಜಿ ಎರಡೂ ಸೇವೆ ಒಟ್ಟಿಗೇ ಒದಗಿಸುವ ತಂತ್ರಜ್ಞಾನ ಪಡೆಯಲಾಗುತ್ತಿದೆ. ಹೀಗಾಗಿ ಬಿ.ಎಸ್.ಎನ್.ಎಲ್. 5ಜಿ ತಂತ್ರಜ್ಞಾನ ಒದಗಿಸುವುದು ತಡವಾಗದು ಎಂದು ಹೇಳಿದರು. ಬಿ.ಎಸ್.ಎನ್.ಎಲ್. ಚೇತರಿಕೆಗೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಖಾಸಗಿ ವಲಯದ ಟೆಲಿಕಾಂ ಸೇವೆಗಳಲ್ಲಿ ಏಕಸ್ವಾಮ್ಯ ಹೊಂದುವುದನ್ನು ಸರ್ಕಾರ ಬಯಸುವುದಿಲ್ಲ. ಬಿ.ಎಸ್.ಎನ್.ಎಲ್. ಖಾಸಗಿ ಸಹಭಾಗಿತ್ವಕ್ಕೆ ಆದ್ಯತೆ ನೀಡುವ ಮೂಲಕ ಕಾರ್ಯನಿರ್ವಹಿಸುತ್ತಿದೆ. ವರ್ಷಾಂತ್ಯದ ಒಳಗೆ ಸಂಸ್ಥೆ ಲಾಭದಾಯಕವಾಗಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಹರಿಹರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಎಫ್.ಟಿ.ಟಿ.ಹೆಚ್. ಸೇವೆ ಆರಂಭಿಸಲಾಗಿದೆ. ಈಗಾಗಲೇ ತಾಲ್ಲೂಕಿನ ಗ್ರಾಮಗಳಲ್ಲಿ 450 ಸಂಪರ್ಕ ನೀಡಲಾಗಿದೆ. ಪ್ರತಿ ಗ್ರಾಮದಲ್ಲೂ ಕನಿಷ್ಠ 50 ಸಂಪರ್ಕ ನೀಡುವ ಗುರಿ ಇದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಎಸ್.ಎನ್.ಎಲ್. ಉಪ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಗೋಪಾಲ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಕೆ. ಜನಾರ್ಧನ್, ಎಂ. ಕಾಂತರಾಜ್, ಮಾರುಕಟ್ಟೆ ಅಧಿಕಾರಿ ಎಂ. ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಭಾರತ ಉದ್ಯಮಿ ಯೋಜನೆ : ಬಿಎಸ್ಸೆನ್ನೆಲ್‌ನಿಂದ ಗ್ರಾಮೀಣ ಭಾಗದಲ್ಲಿ ಮೊದಲ ಬಾರಿಗೆ ಎಫ್.ಟಿ.ಟಿ.ಹೆಚ್. ಸೇವೆ
ಗ್ರಾಮಗಳಲ್ಲಿ ಎಫ್.ಟಿ.ಟಿ.ಹೆಚ್. (ಫೈಬರ್ ಟು ದ ಹೋಮ್) ಇಂಟರ್‌ನೆಟ್ ಹಾಗೂ ದೂರವಾಣಿ ಸೇವೆ ಒದಗಿಸಲಾಗುತ್ತಿದೆ. ಹಳ್ಳಿಗಳಲ್ಲಿ ಈ ಸೇವೆ ಒದಗಿಸುವ ಮೊದಲ ಸಂಸ್ಥೆ ಬಿ.ಎಸ್.ಎನ್.ಎಲ್ ಎಂದು ಚಿತ್ರದುರ್ಗ – ದಾವಣಗೆರೆ ಟೆಲಿಕಾಂ ಜಿಲ್ಲೆಯ ಪ್ರಧಾನ ವ್ಯವಸ್ಥಾಪಕ ಡಿ.ಎಂ. ತ್ರಿಪಾಠಿ ಹೇಳಿದರು. ಎಫ್.ಟಿ.ಟಿ.ಹೆಚ್. ಹೆಚ್ಚು ವೇಗದ ಹಾಗೂ ಗುಣಮಟ್ಟದ ಇಂಟರ್‌ನೆಟ್ ಸೇವೆ ಒದಗಿಸುತ್ತದೆ. ಖಾಸಗಿ ಸಹಭಾಗಿತ್ವದಲ್ಲಿ `ಭಾರತ ಉದ್ಯಮಿ’ ಎಂಬ ಯೋಜನೆಯ ಎಫ್.ಟಿ.ಟಿ.ಹೆಚ್. ಸೇವೆ ನೀಡಲಾಗುವುದು ಎಂದವರು ತಿಳಿಸಿದರು. ಕೇಬಲ್ ಆಪರೇಟರ್ ರೀತಿಯಲ್ಲಿ ಖಾಸಗಿಯವರು ಎಫ್.ಟಿ.ಟಿ.ಹೆಚ್. ಸೇವೆ ಒದಗಿಸಲು ಅವಕಾಶ ಕಲ್ಪಿಸಲಾಗುವುದು. ಪ್ರತಿ ಸಂಪರ್ಕಕ್ಕೆ 3,000 ರೂ.ಗಳ ಸಬ್ಸಿಡಿ ನೀಡಲಾಗುವುದು. ಮಾಸಿಕ ಇಂಟರ್‌ನೆಟ್ ಶುಲ್ಕದ ಅರ್ಧದಷ್ಟನ್ನು ಆಪರೇಟರ್‌ಗಳಿಗೆ ನೀಡಲಾಗುವುದು ಎಂದವರು ವಿವರಿಸಿದರು. ಹೆಚ್ಚಿನ ವಿವರಗಳಿಗೆ ಎಂ. ಗುರುಪ್ರಸಾದ್ : 94498 55560 ಹಾಗೂ ಹೆಚ್. ಪ್ರಶಾಂತ್ : 94834 62567 ಸಂಪರ್ಕಿಸಬಹುದು.