ಹರ್ಷಿತಾ ಕಂಪ್ಯೂಟರ್ ಕಾರ್ಯಕ್ರಮದಲ್ಲಿ ಪತ್ರಕರ್ತ ನಾಗರಾಜ ಬಡದಾಳ್
ದಾವಣಗೆರೆ, ಫೆ. 16- ಆಧುನಿಕ ಜಗತ್ತಿ ನಲ್ಲಿ ಕಂಪ್ಯೂಟರ್ ಜ್ಞಾನವು ಪ್ರತಿಯೊಬ್ಬರಿಗೂ ಅತ್ಯಗತ್ಯ ಎಂಬ ಪರಿಸ್ಥಿತಿ ನಿರ್ಮಾಣವಾ ಗುತ್ತಿದ್ದು, ಕಂಪ್ಯೂಟರ್ ತರಬೇತಿ ಹೊಂದಿದ ವರು ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಹಿರಿಯ ಪತ್ರಕರ್ತ ನಾಗರಾಜ ಎಸ್. ಬಡದಾಳ್ ಕಿವಿಮಾತು ಹೇಳಿದರು.
ನಗರದ ಅಕಾಡೆಮಿಕ್ ಆಫ್ ಅಕೌಂಟ್ಸ್ ಅಂಡ್ ಟ್ಯಾಕ್ಸೇಷನ್ನಲ್ಲಿ ಕಂಪ್ಯೂಟರ್ ತರ ಬೇತಿ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರ ಬಲ್ಲವನಷ್ಟೇ ಅನಕ್ಷರಸ್ಥ ಅಲ್ಲ, ಕಂಪ್ಯೂಟರ್ ಬಳಕೆ ಬಗ್ಗೆ ಅರಿವಿಲ್ಲದವನೂ ಅನಕ್ಷರಸ್ಥ ಎಂಬುದಾಗಿ ನೋಡುವ ಕಾಲ ಇದಾಗಿದೆ ಎಂದರು. ಸಾಕಷ್ಟು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು, ಯುವಕ-ಯುವತಿಯರು ಜೀವನದ ಗುರಿ ಸಾಧಿಸುವ ಪ್ರಯತ್ನ ಮಾಡಿದರೂ, ಗುರಿಯತ್ತ ನೆಟ್ಟ ಮನಸ್ಸು ವಿಚಲಿತವಾಗಬಾರದು. ನಿಮ್ಮ ಹೆತ್ತವರು, ಕುಟುಂಬಸ್ಥರು ನಿಮ್ಮ ಮೇಲೆ ಸಾಕಷ್ಟು ನಂಬಿಕೆ, ವಿಶ್ವಾಸ ಹೊಂದಿರುತ್ತಾರೆ. ಅದ್ಯಾವುದೂ ಹುಸಿಯಾಗದಂತೆ ಜೀವನ ರೂಪಿಸಿಕೊಂಡು, ಸಾಧನೆ ಮಾಡಬೇಕು ಎಂದು ತಿಳಿಸಿದರು.
ಎಲ್ಐಸಿ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ ಭಟ್ ಮಾತನಾಡಿ, ಜೀವನ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಬಂದ ಅವಕಾಶಗಳನ್ನು ಸದ್ಭಳಕೆ ಮಾಡಿ, ಜೀವನ ಕಟ್ಟಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಮ್ಮ ಗುರಿ ಕಡೆಯಿಂದ ಗಮನ ಬೇರೆಡೆ ಹರಿಸಬೇಡಿ. ಗುರು, ಹಿರಿಯರ ಬಗ್ಗೆ ಅಭಿಮಾನ, ಗೌರವ ಸದಾ ಇರಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಡ್ಲೆಬಾಳು ಗ್ರಾಮದ ಹರ್ಷಿತಾ ಕಂಪ್ಯೂಟರ್ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಲೆಕ್ಕ ಪರಿಶೋಧಕ ಜಿ. ಮಹಾಂತೇಶ್ ಮಾತನಾಡಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ ಬಗರೆ, ಮಿರಜ್ಕರ್ ಟ್ಯುಟೋರಿಯಲ್ಸ್ ಮುಖ್ಯಸ್ಥ ಮಲ್ಲಿಕಾರ್ಜುನ ಮಿರಜ್ಕರ್ ಅವರುಗಳು ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಮಾತನಾಡಿದರು.