ಶ್ರೀ ಗುರು ರಾಮದಾಸ ಸ್ವಾಮಿ ಅಧ್ಯಾತ್ಮಿಕ ಸೇವಾ ಟ್ರಸ್ಟ್‌ನ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶ್ರೀ ಬಸವ ಪ್ರಭು ಸ್ವಾಮೀಜಿ
ದಾವಣಗೆರೆ, ಫೆ. 16- ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಇದ್ದರೆ ಬದುಕು ಸ್ವರ್ಗ. ದ್ವೇಷ, ಅಸೂಯೆ, ಮತ್ಸರ, ಅವಿಶ್ವಾಸ, ಅಪನಂಬಿಕೆ ಇದ್ದರೆ ಬಾಳು ನರಕವಾಗುತ್ತದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದರು.
ಇಲ್ಲಿನ ಗಾಂಧಿನಗರದಲ್ಲಿ ಶ್ರೀ ಗುರು ರಾಮ ದಾಸ ಸ್ವಾಮಿ ಅಧ್ಯಾತ್ಮಿಕ ಸೇವಾ ಟ್ರಸ್ಟ್ ವತಿಯಿಂದ ಇಂದು ಹಮ್ಮಿಕೊಂಡಿದ್ದ 32 ನೇ ವರ್ಷದ ಶ್ರೀ ಗುರು ಮಾದಾರ ಚನ್ನಯ್ಯ ಸ್ವಾಮೀಜಿಯವರ ಜಯಂತ್ಯುತ್ಸವ, ಶ್ರೀ ಗುರು ರಾಮದಾಸ ಸ್ವಾಮಿಗಳ 65 ನೇ ವರ್ಷದ ಮತ್ತು ಶ್ರೀ ಮಲ್ಲಯ್ಯ ಸ್ವಾಮಿಗಳ 21 ನೇ ವರ್ಷದ ಹಾಗೂ ಶ್ರೀ ಕೊಂಡಯ್ಯ ಸ್ವಾಮಿಗಳ 17 ನೇ ವರ್ಷದ ಪುಣ್ಯಾರಾಧನೆ , 32 ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆ ಶೀರ್ವಚನ ನೀಡಿದರು.
ಮಾನವನಿಗೆ ಕಣ್ಣುಗಳೆರಡು ದೃಷ್ಟಿ ಒಂದೇ, ಕಿವಿಗಳೆರಡು ಶಬ್ದ ಒಂದೇ, ಸತಿ-ಪತಿಗಳಿಬ್ಬರಿದ್ದರೂ ಮನಸ್ಸು ಒಂದೇ. ಸಂಸಾರದಲ್ಲಿ ಪ್ರೀತಿ ಇದ್ದರೆ ಸ್ವರ್ಗ, ದ್ವೇಷವಿದ್ದರೆ ನರಕ ಎಂದರು.
ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಮುಖ್ಯ. ಮನಸ್ತಾಪ, ಅಪನಂಬಿಕೆ, ಮತ್ಸರ, ಅವಿಶ್ವಾಸ ಭಾವನೆಗಳು ಉಂಟಾದರೆ ಸಂಸಾರವೆಂಬ ಬಂಡಿ ಸರಾಗವಾಗಿ ಸಾಗಲು ಸಾಧ್ಯವಿಲ್ಲ. ವಿರಸದಿಂದ ಕುಟುಂಬಗಳು ಛಿದ್ರಗೊಳ್ಳುವ ಸಾಧ್ಯತೆಗಳಿರುತ್ತವೆ. ಪರಸ್ಪರ ಹೊಂದಾಣಿಕೆಯಿದ್ದರೆ ಬದುಕಿನ ಬಂಡಿ ಸುಗಮವಾಗಿ ಸಾಗುತ್ತದೆ ಎಂದು ಹೇಳಿದರು.
ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಆದಿಜಾಂಬವ ಮಠದ ಶ್ರೀ ಷಡಾಕ್ಷರ ಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಹಾನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ, ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಟ್ರಸ್ಟ್ ಅಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ, ಖಜಾಂಚಿ ಬಿ.ಎಂ. ರಾಮಸ್ವಾಮಿ, ಎಂ. ದುಗ್ಗಪ್ಪ, ಎಲ್.ಎಂ.ಹೆಚ್. ಸಾಗರ್, ಪಾಲಿಕೆ ಸದಸ್ಯ ಜಿ.ಡಿ. ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.