ಹೂವಿನಹಡಗಲಿ, ಫೆ. 14 – ಇಲ್ಲಿನ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕರೊಬ್ಬರು ಪಹಣಿ ತಿದ್ದುಪಡಿಗಾಗಿ ಲಂಚ ಪಡೆಯುತ್ತಿರುವಾಗ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕು ಕಚೇರಿಯ ಡಿಸಿಬಿ ವಿಭಾಗದ ಪ್ರಥಮ ದರ್ಜೆ ಸಹಾಯಕ ವೆಂಕಟಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಹಿರೇಕೊಳಚಿ ಗ್ರಾಮದ ನಿವೃತ್ತ ಶಿಕ್ಷಕ ಲಕ್ಕಪ್ಪ ಅಂಗಡಿ ವಡ್ಡರ ಅವರಿಂದ ಲಂಚದ ಹಣ ಪಡೆಯುತ್ತಿರುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ.
ಹಿರೇಕೊಳಚಿ ಗ್ರಾಮದ ವಡ್ಡರ ಚೌಡಮ್ಮ ಎಂಬುವವರಿಗೆ ಸೇರಿದ ಹಗರನೂರು ಕಂದಾಯ ಗ್ರಾಮದ ಸ.ನಂ. 330/ಎ. ಜಮೀನಿನ ಪಹಣಿ ತಿದ್ದುಪಡಿ ಮಾಡಲು ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯ ನಿರ್ದೇಶ ನದ ಮೇರೆಗೆ ಪಹಣಿ ತಿದ್ದುಪಡಿ ಮಾಡಿ ಕೊಡುವಂತೆ ಜಿಲ್ಲಾಧಿಕಾರಿಗಳು ಆದೇಶಿ ಸಿದ್ದರು. ಆದರೂ ಕೆಲ ದಿನಗಳಿಂದ ಪಹಣಿ ತಿದ್ದುಪಡಿಗೆ ಸತಾಯಿಸಿದ್ದ ವೆಂಕಟಸ್ವಾಮಿ ಈ ಕೆಲಸ ಮಾಡಿಕೊಡಲು 70 ಸಾವಿರ ರೂ. ಲಂಚ ಕೇಳಿದ್ದ ಎಂದು ಆರೋಪಿಸಲಾಗಿತ್ತು. ಚೌಡಮ್ಮನವರ ಪುತ್ರ ನಿವೃತ್ತ ಶಿಕ್ಷಕ ಲಕ್ಕಪ್ಪ ವಡ್ಡರ್ ಅವರಿಂದ ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಹೋಟೆಲ್ಲೊಂದರಲ್ಲಿ ಗುಮಾಸ್ತ 65 ಸಾವಿರ ರೂ. ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಲೋಕಾ ಯುಕ್ತ ಇನ್‌ಸ್ಪೆಕ್ಟರ್‌ಗಳಾದ ಸಂಗಮೇಶ, ಸುರೇಶ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದರು.