ದಾವಣಗೆರೆ, ಫೆ. 14- ನಿಷ್ಪಕ್ಷಪಾತ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿ, ಸಿಪಿಐಎಂ ವತಿಯಿಂದ ನಗರದ ಜಯದೇವ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಹೆಚ್. ಆನಂದರಾಜ್ ಅವರು, ಬಿಜೆಪಿ ಆಡಳಿತದಲ್ಲಿ ಎಲ್ಲಾ ರಂಗಗಳಲ್ಲೂ ಕುಸಿತ ಮತ್ತು ಅರಾಜಕತೆ ತಾಂಡವವಾಡುತ್ತಿದೆ ಎಂದರು.
ತ್ರಿಪುರ ರಾಜ್ಯ ಶಿಕ್ಷಣ, ಆದಿವಾಸಿಗಳ ಆರೋಗ್ಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಉದ್ಯೋಗದಲ್ಲಿ ಅತ್ಯಂತ ಮುಂದುವರೆದ ರಾಜ್ಯ. ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಕುಸಿತ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐದು ವರ್ಷಗಳ ಹಿಂದೆ ತ್ರಿಪುರ ರಾಜ್ಯದಲ್ಲಿ ಎಡಪಕ್ಷಗಳ ನೈತೃತ್ವದ ಸರ್ಕಾರವಿತ್ತು. ಜನಪರವಾದ ಆಡಳಿತಕ್ಕೆ ಹೆಸರುವಾಸಿಯಾಗಿತ್ತು. ಆದಿವಾಸಿ ಬುಡಕಟ್ಟು ಜನತೆಯ ಸಮಗ್ರ ಅಭಿವೃದ್ಧಿಗಾಗಿ ಶಾಸಕಾಂಗದಷ್ಟೇ ಹಕ್ಕು ಬಾಧ್ಯತೆ, ಕರ್ತವ್ಯಗಳು ಮತ್ತು ವಿಶೇಷ ಬಜೆಟ್ಟನ್ನು ಜನಾಭಿವೃದ್ಧಿಗೆ ಬಳಸುತ್ತಾ, ಬುಡಕಟ್ಟು ಸ್ವಾಯತ್ತ ಮಂಡಳಿ ರಚಿಸಿ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣದ ಆಡಳಿತ ನಡೆಸಲಾಗುತ್ತಿತ್ತು.
ಭ್ರಷ್ಟಾಚಾರವಿಲ್ಲದ ಜನಪರವಾದ ಸರ್ಕಾರವೆಂದೇ ಅಂದಿನ ಮುಖ್ಯಮಂತ್ರಿ ಮಾಣಿಕ್ ಸರಕಾರ್ ಅವರ ಸರ್ಕಾರ ಹೆಸರುವಾಸಿಯಾಗಿತ್ತು ಎಂದು ತಿಳಿಸಿದರು.
ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೆ ಕಾರಣರಾಗಿದ್ದು, ಎಡಪಕ್ಷಗಳು ಅಂತೆಯೇ ಉದ್ಯೋಗ ಖಾತ್ರಿಯನ್ನು ನೂರಕ್ಕೆ ನೂರರಷ್ಟು ಭ್ರಷ್ಟಾಚಾರವಿಲ್ಲದೆ ಜನತೆಗೆ ತಲುಪಿಸಿದ್ದು, ಅಂದಿನ ಎಡಪಕ್ಷಗಳ ಸರ್ಕಾರ, ಕೇಂದ್ರ ಸರ್ಕಾರ ಮಾತ್ರ ತ್ರಿಪುರ ರಾಜ್ಯಕ್ಕೆ ಕೊಡಬೇಕಾದಷ್ಟು ಅನುದಾನ ಕೊಡದೆ ಸತಾಯಿಸಿದ್ದು ಇದೇ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಪದಾಧಿಕಾರಿಗಳಾದ ಯು. ಬಸವರಾಜ್, ರೇಣುಕಮ್ಮ, ಮಾಳಮ್ಮ, ರಮೇಶ್, ಪರಶುರಾಮ್, ಶ್ರೀನಿವಾಸಮೂರ್ತಿ, ನೇತ್ರಾವತಿ ಮತ್ತಿತರರಿದ್ದರು.