ಮಂಜೂರಾದ ಕಾಮಗಾರಿ ಹಣ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆ
ದಾವಣಗೆರೆ, ಫೆ.14- ಮಂಜೂರಾದ ಕಾಮಗಾರಿ ಹಣ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಳನಾಡು ಜಲಸಾರಿಗೆ ಇಲಾಖೆಯ ನಾಲ್ವರು ಅಧಿಕಾರಿಗಳ ವಿರುದ್ಧ ಮಂಗಳವಾರ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾ ಯಕ ಕಾರ್ಯ ಪಾಲಕ ಅಭಿಯಂತರ ನರೇಂದ್ರಬಾಬು, ಸಹಾಯಕ ಇಂಜಿನಿಯರ್ ವೀರಪ್ಪ, ಕಾರ್ಯಪಾಲಕ ಇಂಜಿನಿಯರ್ ವಿಜಯಕುಮಾರ್, ಹಾಗೂ ಸೂಪರಿಂಟೆಂಡೆಂಟ್ ಎಂಜಿನಿಯರ್ ಜಗದೀಶ್ ಅವರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಶ್ರೀರಾಮ ಸೇನೆಯ ಮಣಿ ಸರ್ಕಾರ್ ಅವರು ದೂರು ನೀಡಿ, ಆಡಿಯೋ ಹಾಗೂ ವಿಡಿಯೋ ಸಾಕ್ಷಿ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಇಲಾಖೆಗೆ ತೆರಳಿ ಸ್ಥಳ ಪರಿಶೀಲಿಸಿ, ಮಹಜರು ಮಾಡಿದ್ದಾರೆ.
ಮೇಲಿನ ಅಧಿಕಾರಿಗಳಿಗೂ ಸಹ ನಾವು ಈ ಹಣವನ್ನು ಕಳುಹಿಸಬೇಕಾಗಿರುತ್ತದೆ. ಕಡತಗಳಿಗೆ ಸಹಿ ಮಾಡಲು ಹಣವನ್ನು ಕೊಡಿ ಎಂದು ಗುತ್ತಿಗೆದಾರರಿಗೆ ಹೇಳಿರುತ್ತಾರೆ. ಈ ಎಲ್ಲಾ ಮಾಹಿತಿಯನ್ನು ಆಡಿಯೋ ಹಾಗೂ ವೀಡಿಯೋ ಮೂಲಕ ಇವರ ಕಛೇರಿಯಲ್ಲಿ ಲಂಚ ಪಡೆಯುವಾಗ ರೆಕಾರ್ಡ್ ಮಾಡಲಾಗಿದ್ದು, ಪಿ.ಸಿ. ಕಾಯ್ದೆ 1988 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.