ದಾವಣಗೆರೆ, ಫೆ.12- ನಗರದ ಜಿ.ಎಂ. ನರ್ಸರಿ, ಪಿ.ಇ.ಎಸ್ ಹೈಯರ್ ಪ್ರೈಮರಿ ಸ್ಕೂಲ್ ಹಾಗೂ ಅಥಣಿ ಪ್ರೌಢಶಾಲೆ ವತಿಯಿಂದ `ಸ್ವಪ್ನ-4 ಚಿಣ್ಣರ ಕನಸು’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಎಸ್. ಅಥಣಿ ವೀರಣ್ಣ, ಪಿ.ಇ.ಎಸ್ ಹೈಯರ್ ಪ್ರೈಮರಿ ಸ್ಕೂಲ್ನ ಛೇರ್ಮನ್ ಆರ್ ವೆಂಕಟರೆಡ್ಡಿ, ಟ್ರಸ್ಟಿ ಸುಗಂಧರಾಜ್, ಎಸ್.ಬಿ.ಸಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಷಣ್ಮುಖ, ಪಿ.ಜೆ. ಕ್ಲಸ್ಟರ್ನ ಸಿ.ಆರ್.ಪಿ. ಶ್ರೀಮತಿ ಹೇಮಲತಾ ಮತ್ತು ಶಾಲಾ ಮುಖ್ಯೋಪಾ ಧ್ಯಾಯಿನಿ ಶ್ರೀಮತಿ ದಿತ ಡಿ ಮೆನನ್ ಆಗಮಿಸಿದ್ದರು.
ಶಾಲಾ ಮಕ್ಕಳಿಂದ ಬಗೆ ಬಗೆಯ ತಿನಿಸುಗಳ ಖಾದ್ಯ ಮೇಳ, ಜನಪದ ಲೋಕ, ಮೆಹಂದಿ, ವಿವಿಧ ಬಗೆಯ ಆಟಗಳು ಮುಂತಾದ ಹಲವು ವೈವಿಧ್ಯಮಯ ಮಳಿಗೆಗಳನ್ನು ಆಯೋಜಿಸಲಾಗಿತ್ತು.
ಶಾಲೆಯಲ್ಲಿನ ಒಟ್ಟು 500 ವಿದ್ಯಾರ್ಥಿಗಳು ಈ ಮೇಳದಲ್ಲಿ ಉತ್ಸಾಹದಿಂದ ಭಾಗವಹಿಸಿ, ಗ್ರಾಮೀಣ ಸಂಸ್ಕೃತಿಯನ್ನು ಪರಿಚಯಿಸುವಂತಹ ಕಾರ್ಯದಲ್ಲಿ ತೊಡಗಿದ್ದರು. ಇವರಿಗೆ ಬೆಂಬಲವಾಗಿ ನಿಂತವರು ಶಾಲಾ ಶಿಕ್ಷಕರು ಹಾಗೂ ಇದರಿಂದ ಶಾಲಾ ಆವರಣದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಒಂದೆಡೆ ಮಕ್ಕಳ ಪ್ರೀತಿಗೆ ಪಾತ್ರವಾದ ಪಾನಿಪೂರಿ, ಆಲೂ ಬೋಂಡಾ, ಬ್ರೆಡ್ ಬೋಂಡಾ, ಜಾಮೂನ್, ಕಾಯಿ ಹೋಳಿಗೆ, ಅವಲಕ್ಕಿ, ಚುರುಮುರಿ, ಗೋಬಿ ಮಂಚೂರಿ, ಸಮೋಸ, ಫ್ರೂಟ್ ಸಲಾಡ್ ಇನ್ನೂ ಮುಂತಾದ ತಿನಿಸುಗಳ ವ್ಯಾಪಾರ ಜೋರಾಗಿತ್ತು.
ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ವ್ಯಾಪಾರದಲ್ಲಿ ತೊಡಗಿದ್ದರೆ ಪೋಷಕರು ಹಾಗೂ ಕೆಲ ವಿದ್ಯಾರ್ಥಿಗಳು ಟೋಕನ್ ತೆಗೆದುಕೊಳ್ಳಲು ಮುಗಿ ಬಿದ್ದಿದ್ದರು. ಒಟ್ಟಿನಲ್ಲಿ ಸಂಪೂರ್ಣವಾಗಿ ಮಾರುಕಟ್ಟೆಯ ವಾತಾವರಣ ಕಂಡು ಬಂದಿತು. ವಿದ್ಯಾರ್ಥಿಗಳಿಗೆ ಮಾರುಕಟ್ಟೆ ವಸ್ತುಗಳ ಬಗ್ಗೆ ತಿಳುವಳಿಕೆ, ವ್ಯಾಪಾರದಲ್ಲಿ ಲಾಭ, ನಷ್ಟ ಇತ್ಯಾದಿ ವಿಷಯಗಳ ಬಗ್ಗೆ ಪ್ರಾಯೋಗಿಕ ಜ್ಞಾನ ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಮುಖ್ಯೋಪಾಧ್ಯಾಯಿನಿ ಶ್ರೀಮತಿ ದಿತ ಡಿ ಮೆನನ್ ತಿಳಿಸಿದರು.