ಮಾಜಿ ಸೈನಿಕರಿಗೆ ಸರ್ಕಾರದಿಂದ ಸೌಲಭ್ಯಗಳು ಸಿಗುತ್ತಿಲ್ಲ

ಮಾಜಿ ಸೈನಿಕರಿಗೆ ಸರ್ಕಾರದಿಂದ ಸೌಲಭ್ಯಗಳು ಸಿಗುತ್ತಿಲ್ಲ

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಎನ್.ಕೆ. ಶಿವಣ್ಣ ವಿಷಾದ

ಹರಪನಹಳ್ಳಿ, ಫೆ. 12- ಮಾಜಿ ಸೈನಿಕರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು, ಸೂಕ್ತ ಸ್ಥಾನ ಮಾನಗಳು ಸಿಗುತ್ತಿಲ್ಲ. ರಾಜಕಾರಣಿಗಳಿಗೆ ಕೇವಲ ನಮ್ಮ ಮತಗಳಷ್ಟೇ ಬೇಕಿದೆ. ಮುಂದಿನ ದಿನಗಳಲ್ಲಿ ಮೂಲ ಸೌಲಭ್ಯಗಳನ್ನು ನೀಡುವಂತೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಎನ್.ಕೆ. ಶಿವಣ್ಣ ಅವರು ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಬುಧವಾರ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ತಾಲ್ಲೂಕು ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರದಿಂದ ನಮಗೆ ಈವರೆಗೂ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ಸಿಕ್ಕಿಲ್ಲ. ಆದ್ದರಿಂದ ನಾವು ಸಂಘಟಿತರಾಗಿ ಹೋರಾಡಬೇಕಾಗಿದೆ ಎಂದು ಅವರು ಕರೆ ನೀಡಿದರು. 

ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ದೇಶದಲ್ಲಿ ರೈತ ಹಾಗೂ ಯೋಧರು ಎರಡು ಕಣ್ಣುಗಳು ಇದ್ದ ಹಾಗೆ. ರಾಜ್ಯದಲ್ಲಿ ನಿವೃತ್ತ ಸೈನಿಕರಿಗೆ ಕೇವಲ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸ​ವ​ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಮಾಜದಲ್ಲಿ ಗೌರ​ವ​ಯುತ ಸ್ಥಾನ ನೀಡುವಂತಾಗಬೇಕು  ಎಂದು ಹೇಳಿದರು.

ಮಾಜಿ ಸೈನಿಕರ ವಿಜಯನಗರ ಜಿಲ್ಲಾ ಅಧ್ಯಕ್ಷ ಮಂಜುನಾಥ ಜಿ.ಎಸ್ ಮಾತನಾಡಿ, ದೇಶದ ಗಡಿ ಪ್ರದೇಶದಲ್ಲಿ ಯುದ್ಧಗಳಲ್ಲಿ ಸಾವು-ಬದುಕಿನ ಮಧ್ಯೆ ಬದುಕಿ ಬಂದ ನಿವೃತ್ತ ಸೈನಿಕರಿಗೆ ಮೂಲ ಸೌಕರ್ಯ ಕೊಡುವಲ್ಲಿ ಕಡೆಗಣನೆ ಮಾಡುತ್ತಿದೆ, ಹೀಗೆಯೇ ಮುಂದುವ ರೆದರೆ ಮುಂದಿನ ದಿನಗಳಲ್ಲಿ ಗಡಿ ಕಾಯುವ ಸೈನಿಕರ ಕೆಲಸಕ್ಕೆ ಯುವಕರು ಹಿಂದೇಟು ಹಾಕುವಂತೆ ಆಗುವುದು ಖಚಿತ ಎಂದು ಬೇಸರ ವ್ಯಕ್ತ ಪಡಿಸಿದರು.

ತಾಲ್ಲೂಕಿನ ಮಾಜಿ ಸೈನಿಕರ ಘಟಕದ ಅಧ್ಯಕ್ಷ ಜಿ.ದೇವೇಂದ್ರಪ್ಪ ಮಾತನಾಡಿ, ಹರಪನಹಳ್ಳಿ ತಾಲ್ಲೂಕಿನ ಮಾಜಿ ಸೈನಿಕರಿಗೆ ಕೊಡುವ ಭೂಮಿಗಾಗಿ ನೂರಾರು ಬಾರಿ ಅರ್ಜಿಗಳು  ಹಾಕಿದರೂ ಇದುವರೆಗೂ ನಮಗೆ ಭೂಮಿ ಮಂಜೂರು ಮಾಡಿರುವುದಿಲ್ಲ. ನಾವು ಸುಮಾರು ವರ್ಷಗಳ ಕಾಲ ಹೆಂಡತಿ, ಮಕ್ಕಳಿಂದ ದೂರ ಆಗಿ ಪ್ರಾಣ ತ್ಯಾಗ ಮಾಡಿ ದೇಶದ ಸೇವೆ ಮಾಡಿ ಬಂದ ಮಾಜಿ ಸೈನಿಕರಿಗೆ ತಾಲ್ಲೂಕಿನ ಅಧಿಕಾರಿಗಳು, ರಾಜಕಾರಣಿಗಳು  ಕಡೆಗಣನೆ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.

ಭಾರತ ಮತ್ತು ಪಾಕಿಸ್ತಾನ ಯುದ್ದದಲ್ಲಿ ಭಾಗವಹಿಸಿದ್ದ ಹರಪನಹಳ್ಳಿ ತಾಲ್ಲೂಕಿನ ನಾಲ್ಕು ಜನ ಮಾಜಿ ಸೈನಿಕರು ಹಾಗೂ ತಾಲ್ಲೂಕಿನ ಬಾಗಳಿ ಗ್ರಾಮದ ನಾಟಿ ಕೀಲು, ಮೂಳೆ ತಜ್ಞ ಪಂಡಿತ ಬಿ.ಬಿ.ಹೊಸೂರಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಾಗಳಿ ಕೊಟ್ರೇಶಪ್ಪ, ಹೇಮಂತ್ ಕುಮಾರ್, ಈಶ್ವರ್ ನಾಯ್ಕ, ಬಾಗಳಿ ಶಿವಕುಮಾರ ಗೌಡ, ಕು. ಶಿಲ್ಪ ಗೌಡ, ನಟರಾಜ್, ನಿವೃತ್ತ ಸೈನಿಕ ಘಟಕ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಶ್ರೀನಿವಾಸರಾವ್, ರೇಖಪ್ಪ, ಖಜಾಂಚಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ಮಂಜುನಾಥ, ಬಸವಾ ಚಾರಿ, ಶಂಭುಲಿಂಗಪ್ಪ, ಶಾಂತಪ್ಪ, ವಿನೋದ ಪಾಟೀಲ್, ಅನಿಲಕುಮಾರ, ನಾಗನಗೌಡ, ಜೀವನ್, ಗೌಡಜ್ಜ, ಜಿ.ಬಸವರಾಜ, ಎಂ.ಮಂಜಪ್ಪ, ಹಾಲೇಶ, ಕರಿಯಪ್ಪ ಸೇರಿದಂತೆ  ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!