ಹೊನ್ನಾಳಿ, ಫೆ. 10- ದೇವಸ್ಥಾನಗಳನ್ನು ನಿರ್ಮಿಸಿದರೆ ಸಾಲದು, ಅಲ್ಲಿ ಸ್ವಚ್ಛತೆ, ಧಾರ್ಮಿಕತೆ, ನೆಲೆಸುವಂತೆ ನೋಡಿಕೊಳ್ಳಬೇಕು. ಎಲ್ಲಿ ಸ್ವಚ್ಛತೆ, ಶಾಂತಿ, ಧಾರ್ಮಿಕತೆಗಳಿರುತ್ತವೆಯೋ ಅಲ್ಲಿ ದೈವತ್ವ ನೆಲೆಸಿರುತ್ತದೆ ಎಂದು ಹಿರೇಕಲ್ಮಠದ ಡಾ. ಒಡೆಯರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ದೊಡ್ಡಗಣ್ಣಾರ ಕೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಗೃಹ ಪ್ರವೇಶ, ಮೂರ್ತಿಗಳ ಪ್ರತಿಷ್ಟಾಪನೆ, ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಎಲ್ಲಿ ದೇವರು, ಗುರುಗಳ ಬಗ್ಗೆ ಶಕ್ತಿ ನೆಲೆಸಿರುತ್ತದೆಯೋ, ಅಲ್ಲಿ ನೆಮ್ಮದಿಯೂ ಇರುತ್ತದೆ. ದೇವಸ್ಥಾನಗಳನ್ನು ಧಾರ್ಮಿಕ ಆಚರಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಾ ದೇವಸ್ಥಾನಗಳನ್ನು ಶ್ರದ್ದಾಭಕ್ತಿಗಳ ಶಕ್ತಿ ಕೇಂದ್ರಗಳನ್ನಾಗಿ ಬೆಳೆಸಬೇಕು ಎಂದು ಹೇಳಿದರು.
ಕುರುಬ ಸಮಾಜದ ಮುಖಂಡ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ ಮಾತನಾಡಿ, ದೇವಸ್ಥಾನಗಳನ್ನು ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಿದೇ ಎಲ್ಲಾ ವರ್ಗಗಳ ಜನ ಭಕ್ತಿಯಿಂದ ನಡೆದುಕೊಳ್ಳಬೇಕು. ಬಹುತೇಕ ಬಡವರು, ಶ್ರಮಿಕರು ಹೆಚ್ಚಾಗಿರುವ ಈ ಜಾಗದಲ್ಲಿ ತಮ್ಮ ಶ್ರಮದ ಸ್ವಲ್ಪ ಜಾಗವನ್ನು ದೇವರಿಗಾಗಿ ದಾನ ಮಾಡುವ ದೊಡ್ಡ ಮನೋಭಾವನೆ ಹೊಂದಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುರುಬ ಸಮಾಜದ ಹಿರಿಯ ಆಪಿನಕಟ್ಟೆ ರಾಜಪ್ಪ ವಹಿಸಿದ್ದರು. ಯುವ ಮುಖಂಡ ಎಚ್.ಎ.ರಂಜಿತ್ ಸೇರಿದಂತೆ, ಅನೇಕ ಮುಖಂಡರು ಭಾಗವಹಿಸಿದ್ದರು. ದೇವಸ್ಥಾನ ನಿರ್ಮಾಣಕ್ಕಾಗಿ ಸೇವೆ ಸಲ್ಲಿಸಿದವರನ್ನು ಹಾಗೂ ಸಮಾಜದ ಹಿರಿಯನ್ನು ಸನ್ಮಾನಿಸಿ ಗೌರವಿಸಲಾಯಿತು.