ಬೆಂಗಳೂರು, ಫೆ. 9 – ದಾವಣಗೆರೆ `ಜನತಾವಾಣಿ’ ಪತ್ರಿಕೆಯ ಸಂಪಾದಕ ಎಂ.ಎಸ್. ವಿಕಾಸ್, ಟೈಮ್ಸ್ ಆಫ್ ಇಂಡಿಯಾದ ಪಿ.ರಾಕೇಶ್, ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಸುದರ್ಶನ್ ಚೆನ್ನಂಗಿಹಳ್ಳಿ ಸೇರಿದಂತೆ, 120 ಹಿರಿಯ ಪತ್ರಕರ್ತರಿಗೆ ಮಾಧ್ಯಮ ವಾರ್ಷಿಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ನಾಲ್ಕು ವರ್ಷಗಳ (2019, 2020, 2021 ಮತ್ತು 2022) ಸಾಲಿಗೆ ರಾಜ್ಯದ ಮಾಧ್ಯಮಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ. ಸದಾಶಿವ ಶೆಣೈ ಇಂದಿಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ ರೂ.50,000ಗಳು, ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ.ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ನಾಲ್ಕು ವರ್ಷಗಳು ಸೇರಿ 124 ಮಂದಿ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಒಟ್ಟು 21 ಮಂದಿ ಪತ್ರಕರ್ತರನ್ನು ‘ದತ್ತಿ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಫೆಬ್ರವರಿ ಅಂತ್ಯ ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ಪ್ರಶಸ್ತಿ ಸಮಾರಂಭ ಜರುಗಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.