ರಾಜನಹಳ್ಳಿ: ಸಂಭ್ರಮದ ರಥೋತ್ಸವ

ರಾಜನಹಳ್ಳಿ: ಸಂಭ್ರಮದ ರಥೋತ್ಸವ

ಮಲೇಬೆನ್ನೂರು, ಫೆ.9- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ 5ನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಗುರುವಾರ ಬೆಳಿಗ್ಗೆ 64 ಅಡಿ ಎತ್ತರದ ಅತ್ಯಾಧುನಿಕ ರಥವನ್ನು ಸಿರಿಗೆರೆ ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸೇರಿದಂತೆ, ವಿವಿಧ ಮಠಾಧೀಶರು ಪುಷ್ಪಾರ್ಚನೆ ಮೂಲಕ ಲೋಕಾರ್ಪಣೆ ಮಾಡಿದರು.

ಇದಕ್ಕೂ ಮುನ್ನ ರಥದ ದಾನಿಗಳಾದ ಸಚಿವ ಆನಂದ್‌ ಸಿಂಗ್‌ ಹಾಗೂ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು ಕ್ರೇನ್‌ ಮೂಲಕ ರಥದ ಮೇಲೆ ತೆರಳಿ ವಾಲ್ಮೀಕಿ ಮೂರ್ತಿಯನ್ನು ರಥದಲ್ಲಿ ಇಟ್ಟು ಪೂಜೆ ಸಲ್ಲಿಸಿ ಕೆಳಗಡೆ ಬಂದರು.

ನಂತರ ರಥಕ್ಕೆ ಪೂಜೆ ಸಲ್ಲಿಸಿ, ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.

ಈ ವೇಳೆ ಹಾಜರಿದ್ದ ಸಾವಿರಾರು ಭಕ್ತರು ಜಯಘೋಷದೊಂದಿಗೆ ರಥವನ್ನು ಎಳೆದು ಸಂಭ್ರಮಿಸಿದರು. ಬುಡಕಟ್ಟು ಸಾಂಸ್ಕೃತಿಕ ಕಲಾ ತಂಡಗಳು ಮತ್ತು ವೀರಗಾಸೆ, ಗೊಂಬೆ ಕುಣಿತ ರಥೋತ್ಸವಕ್ಕೆ ಮೆರಗು ತಂದವು. ರಥವನ್ನು ಬಹಳ ವಿಶೇಷವಾಗಿ ಸಿಂಗಾರ ಮಾಡಲಾಗಿತ್ತು. ರಿಮೋಟ್‌ ಕಂಟ್ರೋಲ್‌ ಮೂಲಕ ರಥವನ್ನು ನಿಯಂತ್ರಿಸಲಾಗುತ್ತಿತ್ತು. ಈ ರಥ 2 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿದ್ದು, ರಾಜ್ಯದಲ್ಲಿಯೇ ಅತಿ ದೊಡ್ಡ ರಥ ಎನ್ನಲಾಗಿದೆ.

ಜಾತ್ರಾ ಸಮಿತಿ ಅಧ್ಯಕ್ಷರಾದ ಶಾಸಕ ಎಸ್‌.ವಿ. ರಾಮಚಂದ್ರ, ಸಂಚಾಲಕ ಕೆ.ಪಿ. ಪಾಲಯ್ಯ, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಮಾಜಿ ಶಾಸಕರಾದ ಬಿ.ಪಿ. ಹರೀಶ್‌, ಎಸ್‌.ಕೆ. ಬಸವರಾಜನ್‌, ಕೆಪಿಎಸ್ಸಿ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ, ಮುಖಂಡ ಟಿ. ಈಶ್ವರ್‌, ನಿವೃತ್ತ ಪೊಲೀಸ್‌ ಅಧಿಕಾರಿ ಪಂಪಾಪತಿ, ಮಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್‌, ಹರ್ತಿಕೋಟಿ ವೀರೇಂದ್ರಸಿಂಹ, ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಲಂಕೇಶ್‌, ಜಿ.ಪಂ. ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ರಥದ ಶಿಲ್ಪಿ ಯಲ್ಲಾಪುರದ ಸಂತೋಷ್‌ ಗುಡಿಗಾರ್‌ ಸೇರಿದಂತೆ   ಪ್ರಮುಖರು ಭಾಗವಹಿಸಿದ್ದರು.  ಪೊಲೀಸರು ಬಿಗಿಭದ್ರತೆ ಒದಗಿಸಿದ್ದರು. 

error: Content is protected !!