ಪೂರ್ವ ಸಿದ್ದತೆ ಪರಿಶೀಲನಾ ಸಭೆಯಲ್ಲಿ ಜಿಲ್ಲಾಡಳಿತಕ್ಕೆ ಶಾಸಕ ಎಸ್.ವಿ ರಾಮಚಂದ್ರ ಮನವಿ
ಮಲೇಬೆನ್ನೂರು, ಫೆ. 6- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ.08 ಹಾಗೂ 09 ರಂದು ನಡೆಯುವ 5 ನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಸಹಕಾರ ನೀಡುವಂತೆ ಜಾತ್ರಾ ಸಮಿತಿಯ ಅಧ್ಯ ಕ್ಷರೂ ಆದ ಜಗಳೂರು ಶಾಸಕ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ವಿ.ರಾಮಚಂದ್ರ ತಿಳಿಸಿದರು.
ಅವರು ಸೋಮವಾರ ವಾಲ್ಮೀಕಿ ಮಠದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಾತ್ರೆಯ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದರು. ಈ ವರ್ಷ ನಡೆಯುವ ವಾಲ್ಮೀಕಿ ಜಾತ್ರೆ ಬಹಳ ವಿಶೇಷವಾಗಿದ್ದು, ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಜಾತ್ರೆಗೆ ಹೆಚ್ಚು ಜನ ಸೇರಿಲಿದೆ. ಯಾವುದೇ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ಜಾತ್ರೆ ಸಿದ್ದತೆಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ವಾಲ್ಮೀಕಿ ಮಠದಿಂದ ರಥೋತ್ಸವ ಹಾಗೂ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಅತ್ಯಂತ ಶಿಸ್ತಿನಿಂದ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಜಾತ್ರೆಗೆ ಹೆಚ್ಚು ಜನರು ಸೇರುವ ನಿರೀಕ್ಷೆ ಇರುವುದರಿಂದ ಯಾವುದೇ ಸಮಸ್ಯೆಯಾಗದಂತೆ ವಿವಿಧ ಇಲಾಖಾ ಅಧಿಕಾರಿಗಳು ಪೂರ್ವ ಸಿದ್ದತೆ ಕೈಗೊಂಡು ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿಯಿಂದ ರಾಜನಹಳ್ಳಿಗೆ ಪ್ರವೇಶ ಮಾಡುವ ಮಾರ್ಗದ ಅಗತ್ಯ ರಸ್ತೆ ದುರಸ್ತಿ , ಕುಡಿಯುವ ನೀರಿನ ವ್ಯವಸ್ಥೆಗೆ ಟ್ಯಾಂಕರ್ಗಳ ನಿಯೋಜನೆ, ಅಂಬ್ಯೂಲೆನ್ಸ್ ಹಾಗೂ ವೈದ್ಯಕೀಯ ತಂಡಗಳ ನಿಯೋಜನೆ ಹಾಗೂ ಅಗ್ನಿಶಾಮಕ ವಾಹನ ನಿಯೋಜನೆ ಸೇರಿದಂತೆ ಅಗತ್ಯ ವ್ಯವಸ್ಥೆಯನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸುವುದರಿಂದ ಯಾವುದೇ ವಿದ್ಯುತ್ ವ್ಯತ್ಯಯವಾಗದಂತೆ ಎರಡು ದಿನ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು, ಸ್ವಚ್ಚತೆ ಮತ್ತು ಕಸ ವಿಲೇವಾರಿಗೆ ಹರಿಹರ ನಗರಸಭೆ ಹಾಗೂ ರಾಜನಹಳ್ಳಿ ಗ್ರಾಮ ಪಂಚಾಯಿತಿ ಜಂಟಿಯಾಗಿ ಕಾರ್ಯನಿರ್ವಹಣೆ ಮಾಡಿ ಹೆಚ್ಚುವರಿಗೆ ಸಕ್ಕಿಂಗ್ ಮಿಷನ್ ಬಳಕೆ ವಾಹನಗಳ ಮೂಲಕ ಕಸ ವಿಲೇವಾರಿಗೆ ಕ್ರಮವಹಿಸುವಂತೆ ನಿರ್ದೇಶನ ನೀಡಿದರು. ಸರ್ಕಾರದ ವಿವಿಧ ಯೋಜನೆಗಳ ಜಾಗೃತಿಗಾಗಿ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಬೇಕು ಹಾಗೂ ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಉದ್ಯೋಗಮೇಳ ವನ್ನು ವ್ಯವಸ್ಥಿತವಾಗಿ ನಡೆಸಿಕೊಡುವಂತೆ ಕೈಗಾರಿಕೆ ಇಲಾಖೆಯ ಜಂಟಿನಿರ್ದೇಶಕರಿಗೆ ಹೇಳಿದರು.
ಹೆಲಿಪ್ಯಾಡ್ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ಸೇರಿದಂತೆ ಎಲ್ಲಿಯೂ ಗೊಂದಲ ಆಗದಂತೆ ವ್ಯವಸ್ಥಿತವಾಗಿ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾತನಾಡಿ ಜಾತ್ರಾ ಮಹೋತ್ಸವಕ್ಕೆ ಎರಡು ದಿನ ಮಾತ್ರ ಬಾಕಿ ಇದೆ. ಸಿದ್ದತೆಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡು ಯಾವುದೇ ಲೋಪವಾಗದಂತೆ ವ್ಯವಸ್ಥೆ ಮಾಡಬೇಕು. ಹೆಚ್ಚು ಜನಸಂದಣಿ ಸೇರುವುದರಿಂದ ವ್ಯವಸ್ಥಿತವಾಗಿ ಬ್ಯಾರಿಕೇಡಿಂಗ್ ಮತ್ತು ವಿದ್ಯುತ್ ದೀಪಗಳ ವ್ಯವಸ್ಥೆ, ಸಂಪರ್ಕ ರಸ್ತೆಗಳ ದುರಸ್ತಿ ಹಾಗೂ ಮಾರ್ಕಿಂಗ್ ಗಣ್ಯರು, ಅತಿಗಣ್ಯರು ಪ್ರವೇಶಕ್ಕೆ ಪ್ರತ್ಯೇಕ ವ್ಯವಸ್ಥೆ ಹಾಗೂ ಕಾರ್ಯಕ್ರಮಕ್ಕೆ ಪ್ರವೇಶದ್ವಾರ ಹಾಗೂ ನಿರ್ಗಮನ ದ್ವಾರ ಪಾರ್ಕಿಂಗ್ ವ್ಯವಸ್ಥೆಯನ್ನು ಕುರಿತಂತೆ ಸಿದ್ದತೆ ಮಾಡಿಕೊಳ್ಳುವಂತೆ ಎಎಸ್ಪಿಗೆ ಹೇಳಿದರು.
ಜಿ.ಪಂ ಸಿಇಓ ಡಾ.ಎ ಚೆನ್ನಪ್ಪ ಮಾತನಾಡಿ ಜಾತ್ರೆಯ ಯಶಸ್ಸಿಗೆ ಸಹಕರಿಸುವುದಾಗಿ ಹೇಳಿದರು. ಸಭೆಯ ದಿವ್ಯಸಾನ್ನಿಧ್ಯ ವಹಿಸಿದ್ದ ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ವಾಲ್ಮೀಕಿ ಜಾತ್ರಾ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತದೆ. ವಾಲ್ಮೀಕಿ ಜಾತ್ರೆ ವೈಚಾರಿಕ ಜಾತ್ರಾ ಆಗಿದೆ. ಈ ವರ್ಷ ವಿಶೇಷವಾಗಿ ಜಾತ್ರೆ ಆಯೋಜನೆ ಮಾಡಲಾಗಿದ್ದು, ಜಾತ್ರೆಗೆ 4 ರಿಂದ 5 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಜಾತ್ರೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಜಿಲ್ಲಾಡಳಿತದ ಸಹಕಾರ ಅಗತ್ಯವಾಗಿದೆ ಎಂದರು.
ಫೆ 08 ರಂದು ಬೆಳಿಗ್ಗೆ 8 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಶ್ರೀಮಹರ್ಷಿ ವಾಲ್ಮೀಕಿ ಧ್ವಜಾರೋಹಣ, ಮಹಿಳಾ ಗೋಷ್ಠಿ, ಉದ್ಯೋಗ ಮೇಳ, ರೈತ ಗೋಷ್ಠಿ, ಬುಡಕಟ್ಟು ಸಂಸ್ಕೃತಿಕ ವೈಭವದ ಕಾರ್ಯಕ್ರಮಗಳು ಜರುಗಲಿವೆ. ಫೆ.09 ರಂದು ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಸ್ಚಚ್ಚತಾ ಕಾರ್ಯಕ್ರಮ ಇರುತ್ತದೆ. ನೂತನ ರಥ ಲೋಕಾರ್ಪಣೆ ಹಾಗೂ ಮಹಾ ರಥೋತ್ಸವದ ನಂತರ ಧರ್ಮಸಭೆ ನಡೆನಡೆಯಲಿದೆ. 11 ಗಂಟೆಗೆ ಜನಜಾಗೃತಿ ಜಾತ್ರಾ ಮಹೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿವೆ.
ಫೆ.09ರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ಡಿ ಕೆ ಶಿವಕುಮಾರ್, ನಳೀನ್ ಕುಮಾರ್ ಕಟೀಲು, ಸಿ ಎಂ ಇಬ್ರಾಹಿಂ, ಸಚಿವರಾದ ಶ್ರೀರಾಮುಲು, ಆರ್.ಅಶೋಕ, ಬೈರತಿ ಬಸವರಾಜ ಹಾಗೂ ಸತೀಶ್ ಜಾರಕಿಹೊಳಿ ಸೇರಿದಂತೆ ಇನ್ನೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು. ಮಠದ ಆಡಳಿತಾಧಿಕಾರಿ ಟಿ ಓಬಳಪ್ಪ, ಜಾತ್ರಾ ಸಮಿತಿ ಸಂಚಾಲಕ ಕೆ ಪಿ ಪಾಲಯ್ಯ, ಜಿ ಪಂ ಮಾಜಿ ಸದಸ್ಯರಾದ ಎಂ ನಾಗೇಂದ್ರಪ್ಪ, ಸೊಕ್ಕೆ ನಾಗರಾಜ್, ತಾ ಪಂ ಮಾಜಿ ಅಧ್ಯಕ್ಷ ಮಾಗನಹಳ್ಳಿ ಹಾಲಪ್ಪ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಮಠದ ಧರ್ಮದರ್ಶಿ ಕೆ ಬಿ ಮಂಜುನಾಥ್, ನಗರಸಭೆ ಸದಸ್ಯ ದಿನೇಶ್ ಬಾಬು, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಜಿ.ಪಂ.ಡಿಎಸ್ ಕೃಷ್ಣನಾಯ್ಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ್ ಬಸರಗಿ, ಎಎಸ್ಪಿ ಕನ್ನಿಕಾ ಸಿಕ್ರಿವಾಲ್, ಸಿಪಿಐ ಗೌಡಪ್ಪ, ಪಿಎಸ್ಐ ರಾಜು ತಹಸೀಲ್ದಾರ್ ಪೃತ್ವಿ, ತಾ ಪಂ ಇಓ ಗಂಗಾಧರನ್, ಡಿಹೆಚ್ಓ ಡಾ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರವಿಚಂದ್ರ, ವಾರ್ತಾಧಿಕಾರಿ ರಂಗನಾಥ್ ಮತ್ತು ಜಿಲ್ಲಾ ಹಾಗು ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ರಮೇಶ್ ಹೊದಿಗೆರೆ ಕಾರ್ಯಕ್ರಮ ನಿರೂಪಿಸಿದರೆ, ಕೊನೆಯಲ್ಲಿ ಪತ್ರಕರ್ತ ಜಿಗಳಿ ಪ್ರಕಾಶ್ ವಂದಿಸಿದರು.