ದಾವಣಗೆರೆ, ಫೆ.4- ನಗರದ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಶ್ವಾನ ಪ್ರದರ್ಶನದಲ್ಲಿ ದಾವಣಗೆರೆ ಸೇರಿದಂತೆ, ವಿವಿಧ ಜಿಲ್ಲೆಗಳಿಂದ 19ಕ್ಕೂ ಹೆಚ್ಚು ವಿವಿಧ ತಳಿಗಳ 200ಕ್ಕೂ ಹೆಚ್ಚು ಶ್ವಾನಗಳನ್ನು ಪಾಲ್ಗೊಂಡಿದ್ದವು.
ಮಾಲೀಕರು ತಾವು ಸಾಕಿದ ಶ್ವಾನಗಳನ್ನು ಅತಿ ಜಾಗರೂಕತೆಯಿಂದ ಪ್ರದರ್ಶನಕ್ಕೆ ಕರೆ ತಂದಿದ್ದರು. ಶ್ವಾನ ಪ್ರಿಯರಿಗಂತೂ ಪ್ರದರ್ಶನ ಹಬ್ಬದ ಖುಷಿ ನೀಡಿತ್ತು. ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೂ ಪ್ರದರ್ಶನಕ್ಕೆ ನೋಂದಣಿ ಪ್ರಕ್ರಿಯೆ ನಡೆದಿತ್ತು. ಸಂಜೆ ವರೆಗೂ ಪ್ರದರ್ಶನ ನಡೆಯಿತು.
ಐರಿಸ್ ಶೆಟರ್, ಗ್ರೇಟ್ ಡೇನ್, ಅಮೆರಿಕನ್ ಬುಲ್, ಚೌಚೌ, ಲ್ಯಾಬರ್‌ಡರ್, ಜರ್ಮನ್ ಶಫರ್ಡ್, ಪಗ್, ರಾಟ್ ವೀಲರ್, ಸೈಬೀರಿಯನ್ ಹಸ್ಕಿ, ಮುಧೋಳ ಸೇರಿದಂತೆ ಹಲವು ತಳಿಯ ಶ್ವಾನಗಳಿದ್ದವು. ಕೆಲ ಶ್ವಾನಗಳು ಮುದ್ದು ಮುದ್ದಾಗಿದ್ದರೆ, ಮತ್ತೆ ಕೆಲವು ಭಯ ಹುಟ್ಟಿಸುವಂತಿದ್ದವು.
ತಾವೂ ಸಹ ಯಾರಿಗೂ ಕಡಿಮೆ ಇಲ್ಲ ಎಂಬಂತೆ ಪ್ರದರ್ಶನದಲ್ಲಿ ಶ್ವಾನಗಳು ಹೆಜ್ಜೆ ಹಾಕಿದವು. ಮಾಲೀಕರ ಮಾತುಗಳನ್ನು ಕೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದವು. ನಡಿಗೆ, ಮಾಲೀಕರ ಮಾತು ಕೇಳುವ ಬಗೆ, ಆರೋಗ್ಯ ಪರೀಕ್ಷಿಸಿ ತೀರ್ಪುಗಾರರು ತೀರ್ಪು ನೀಡುತ್ತಿದ್ದರು.
ಶ್ವಾನಗಳ ಮುದ್ದಾದ ಹಾಗೂ ಗಾಂಭೀರ್ಯ ನಡಿಗೆಯನ್ನು ಪ್ರಾಣಿ ಪ್ರಿಯರು ಮೊಬೈಲ್ ಗಳಲ್ಲಿ ಸೆರೆ ಹಿಡಿಯುತ್ತಿದ್ದರು. ಚಿಕ್ಕ ಮಕ್ಕಳು ಮುದ್ದಿನ ಶ್ವಾನಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಕೆಲವರು ತಮಗೆ ಇಷ್ಟವಾದ ಶ್ವಾನಗಳ ದರ ಹಾಗೂ ಸಿಗುವ ವಿಳಾಸವನ್ನು ವಿಚಾರಿಸುತ್ತಿದ್ದರು. ಕೆಲ ಶ್ವಾನಗಳು ಬಿಸಿಲಿನ ಧಗೆಗೆ ಬಳಲುತ್ತಿದ್ದವು. ಆಯೋಜಕರು ಐಸ್ ವ್ಯವಸ್ಥೆ ಕಲ್ಪಿಸಿದ್ದರು. ಮಾಲೀಕರು ಐಸ್ ಪಡೆದು ಶ್ವಾನಗಳಿಗೆ ತಿನಿಸುತ್ತಿದ್ದರು.
ಇದೇ ಪ್ರಥಮ ಬಾರಿಗೆ ಶ್ವಾನ ಪ್ರದರ್ಶನಕ್ಕೆಂದು ತಮ್ಮ 5 ವರ್ಷದ ಐರಿಸ್ ಶೆಟರ್ ಶ್ವಾನದೊಂದಿಗೆ ದಾವಣಗೆರೆ ಡಿಸಿಎಂ ಟೌನ್‌ಶಿಪ್ ವಾಸಿ ಬಿಂದು ಹಾಗೂ ಕೃಷ್ಣ ದಂಪತಿ ಆಗಮಿಸಿದ್ದರು. ಪ್ರಥಮ ಬಾರಿಗೆ ಪ್ರದರ್ಶನಕ್ಕೆ ಆಗಮಿಸಿದ್ದು, ಖುಷಿ ನೀಡಿದೆ. ಜೊತೆಗೆ ಬೇರೆ ಬೇರೆ ತಳಿಯ ಶ್ವಾನಗಳ ವೀಕ್ಷಣೆಗೂ ಸಹಕಾರಿಯಾಗಿದೆ ಎಂದರು. ದಾವಣಗೆರೆಯಲ್ಲಿ ಈ ತಳಿಯ ಎರಡು ಶ್ವಾನಗಳು ಮಾತ್ರ ಇರುವುದಾಗಿ ಬಿಂದು ಹೇಳಿದರು.
ಹೊಸಪೇಟೆಯಿಂದ ಬಂದಿದ್ದ ಪ್ರವೀಣ್, ಗ್ರೇಟ್ ಡೇನ್ ತಳಿಯ ಶ್ವಾನ ತಂದಿದ್ದರು.ಬಳ್ಳಾರಿಯ ಉತ್ಸವದಲ್ಲಿ ತಮ್ಮ ಶ್ವಾನವು ಪ್ರಥಮ ಬಹುಮಾನ ಪಡೆದಿತ್ತು. ಕಳೆದ ಹತ್ತು ವರ್ಷ ಗಳಿಂದ ವಿವಿಧೆಡೆ ಶ್ವಾನ ಪ್ರದರ್ಶನಗಳಿಗೆ ಹೋಗು ತ್ತಿದ್ದೇನೆ. ತಮ್ಮ ಮುದ್ದಿನ ಶ್ವಾನಕ್ಕೆ ಬೋಂಡ ಎಂದು ಹೆಸರಿಟ್ಟಿರುವುದಾಗಿ ಹೇಳಿದರು.
ನಿಟುವಳ್ಳಿಯ ಲೆನಿನ್ ನಗರದ ಸಂತೋಷ್ 8 ತಿಂಗಳ ಸೆಂಟ್ ಬರ್ನಾಡ್ ತಳಿಯ ಶ್ವಾನದೊಂದಿಗೆ ಇದೇ ಪ್ರಥಮ ಬಾರಿಗೆ ಪ್ರದರ್ಶನಕ್ಕೆ ಆಗಮಿಸಿದ್ದರು. ಶಿವಕುಮಾರ ಸ್ವಾಮಿ ಬಡಾವಣೆಯ ಕುಶಾಲ್ ಕುಮಾರ್ ಸಹ ಪ್ರಥಮ ಬಾರಿಗೆ ರಾಟ್ ವ್ಹೀಲರ್ ತಳಿಯ 6 ತಿಂಗಳ ಶ್ವಾನ ಕರೆತಂದಿದ್ದರು.
ದಾವಣಗೆರೆಯ ಮಮತಾ ದೇವರಾಜ್, 5 ತಿಂಗಳ ಚೌಚೌ ತಳಿಯ ಶ್ವಾನವನ್ನು ಕರೆ ತಂದಿದ್ದರು. ಪ್ರಿನ್ಸ್ ಹೆಸರಿನ ಈ ಶ್ವಾನ, ಜ್ಯೂನಿಯರ್ ಹ್ಯಾಂಡ್ಲರ್ ಪ್ರಶಸ್ತಿ ಪಡೆದಿದ್ದಾಗಿ ಹೇಳಿದರು.
ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ ವತಿಯಿಂದ ಪ್ರದರ್ಶನ ಏರ್ಪಡಿಸಲಾಗಿತ್ತು. ಬೆಸ್ಟ್ ಇನ್ ಶೋ ವಿಭಾಗದಲ್ಲಿ ಪ್ರಥಮ ಬಹುಮಾನ 25 ಸಾವಿರ, 15 ಸಾವಿರ ದ್ವಿತೀಯ ಹಾಗೂ 10 ಸಾವಿರ ರೂ. ತೃತೀಯ ಬಹುಮಾನವಿತ್ತು. ಬೆಸ್ಟ್ ಇನ್ ಪಪ್ಪಿ ವಿಭಾಗದಲ್ಲಿ ಪ್ರಥಮ 5 ಸಾವಿರ, ದ್ವಿತೀಯ 3ಸಾವಿರ ಹಾಗೂ 2 ಸಾವಿರ ತೃತೀಯ ಬಹುಮಾನ ನಿಗದಿಯಾಗಿತ್ತು. ಭಾರತೀಯ ತಳಿಗಳಿಗೆ ಬೆಸ್ಟ್ ಅಡಲ್ಟ್ ವಿಭಾಗಲ್ಲಿ 3 ಸಾವಿರ ರೂ. ಹಾಗೂ ಬೆಸ್ಟ್ ಪಪ್ಪಿ ವಿಭಾಗದಲ್ಲಿ 2 ಸಾವಿರ ರೂ. ಬಹುಮಾನ ನೀಡಲಾಯಿತು.