`ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್’

`ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್’

ಹರಪನಹಳ್ಳಿ ಪಟ್ಟಣದ ಮೈಲಾರ ಲಿಂಗೇಶ್ವರ ಸ್ವಾಮಿ ಕಾರಣಿಕ

ಹರಪನಹಳ್ಳಿ, ಫೆ.5- ಪಟ್ಟಣದ ಗೌರಿಹಳ್ಳಿ ರಸ್ತೆಯಲ್ಲಿರುವ ಶ್ರೀ ಮೈಲಾರ ಲಿಂಗೇಶ್ವರ ವರ್ಷದ ಭವಿಷ್ಯ ಕಾರಣಿಕ `ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್’ ಎಂದು ಗೊರವಪ್ಪ ನುಡಿದರು. 

ಸಹಸ್ರಾರು ಭಕ್ತಾದಿಗಳ ನಡುವೆ ಬಿಲ್ಲನ್ನೇರಿದ ಮೈಲಾರಲಿಂಗನ ಗೊರವ ಕೋಟೆಪ್ಪ ‘ಸದ್ದಲೇ…’ ಎನ್ನುತ್ತಿದ್ದಂತೆಯೇ ಎಲ್ಲವೂ ಕ್ಷಣಕಾಲ ನಿಶ್ಯಬ್ಧವಾಯಿತು. ನಂತರ ಕಾರಣಿಕದ ಉಕ್ತಿಯನ್ನು ನುಡಿದ ಗೊರವಪ್ಪ ಕೆಳಗೆ ಬೀಳುವ ದೃಶ್ಯ ಸ್ವಾಮಿಯ ಪವಾಡದಂತೆ ಗೋಚರಿಸಿತು ಎಂಬುದು ಭಕ್ತರ ಉವಾಚ.

ಒಕ್ಕಲುತನ ಸಂಸ್ಕೃತಿಯ ವಿಶಿಷ್ಟ ಆಚರಣೆಯ ತಾಲ್ಲೂಕಿನ ದೊಡ್ಡಮೈಲಾರ ಎಂದೇ ಪ್ರಚಲಿತದಲ್ಲಿರುವ ಮೈಲಾರಲಿಂಗೇಶ್ವರ ಸ್ವಾಮಿ ಕುರಿತು ಹಲವು ದಂತ ಕಥೆಗಳು ಈ ನೆಲದಲ್ಲಿ ಜಾನಪದ ಸೊಗಡಿನಲ್ಲಿ ಹಾಸುಹೊಕ್ಕಾಗಿವೆ. 

ಪ್ರತಿ ವರ್ಷ ಭರತ ಹುಣ್ಣಿಮೆಯಂದು ಸಂಜೆ ಕಾರಣಿಕೋತ್ಸವ ಜರುಗುತ್ತದೆ. ವರ್ಷದಲ್ಲಿ ಎರಡು ಬಾರಿ ಕಾರಣಿಕೋತ್ಸವ ಜರಗುತ್ತದೆ. 

ದಸರಾ ಹಬ್ಬದಲ್ಲಿ ನುಡಿಯುವ ಕಾರಣಿಕ ರಾಜಕೀಯಕ್ಕೆ ಹಾಗೂ ಭರತ ಹುಣ್ಣಿಮೆಯ ಕಾರಣಿಕ ಬೆಳೆಗಳ ಮೇಲೆರುತ್ತದೆ ಎಂಬ ಪ್ರತೀತಿ ಇದೆ. ಈ ವರ್ಷದ ಕಾರಣಿಕ ಉತ್ತಮವಾಗಿದ್ದು ಮಳೆ, ಬೆಳೆ ಚೆನ್ನಾಗಿ ಆಗುತ್ತದೆ ಎಂದು ಹಿರಿಯರು ಮಾತಾಡಿಕೊಳ್ಳುತ್ತಿದ್ದರು. ಸರಪಳಿ ಪವಾಡ ಹಾಗೂ ಕಡುಬಿನ ಕಾಳಗವೂ ಸಹ ಗೊರವರಿಂದ ನಡೆಯುತ್ತಿದೆ ಎಂದು ದೇವಳ ಸಮಿತಿಯ ಧರ್ಮದರ್ಶಿ ಪಿ.ದತ್ತಾತ್ರೇಯರಾವ್ ತಿಳಿಸಿದರು. ಈ ವೇಳೆ  ವಂಶಪಾರಂಪರಿಕ ಧರ್ಮಕರ್ತರಾದ ನಾಗೇಶ್ವರರಾವ್, ಮಾರ್ತಾಂಡ ರಾವ್, ಕೋಟೇಶ್ವರ ರಾವ್,  ಪುರಸಭೆ ಸದಸ್ಯ ಕಿರಣ್ ಶಾನುಭೋಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!