ಮಲೇಬೆನ್ನೂರು, ಫೆ.5- ನೀರನ್ನು ಶುದ್ಧೀಕರಿಸಿ, ಬಾಟಲ್ ಮೂಲಕ ಸಂಗ್ರಹ ಮಾಡಿರುವ ನೀರನ್ನು ಬಿಸಿಲಿನಲ್ಲಿ ಇಟ್ಟಾಗ ಆ ಪ್ಲಾಸ್ಟಿಕ್ ಬಾಟಲಿಯಿಂದ ರಾಸಾಯನಿಕಗಳು ಬಿಡುಗಡೆ ಹೊಂದುತ್ತವೆ. ಇಂತಹ ಬಾಟಲ್ ನೀರನ್ನು ಸೇವನೆ ಮಾಡುವುದರಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನಟರಾಜ್ ಹೇಳಿದರು.
ಅವರು ಶನಿವಾರ ಜಿಗಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಕ್ಯಾನ್ಸರ್ ಜಾಗೃತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಆಹಾರ ಪದ್ಧತಿಯ ಸೇವನೆಯಿಂದಲೂ ಕ್ಯಾನ್ಸರ್ ಬರುತ್ತದೆ. ಕರಿದ ಎಣ್ಣೆಯಲ್ಲಿ ಪದೇ ಪದೇ ಆಹಾರವನ್ನು ತಯಾರಿಸುವುದು. ಅದೇ ರೀತಿ ಇತರೆ ಆಹಾರ ಪದಾರ್ಥಗಳಿಗೆ ಇಂತಹ ಎಣ್ಣೆಯನ್ನು ಬಳಸುವುದರಿಂದ ಫಾಸ್ಟ್ ಫುಡ್ ಹೆಚ್ಚು ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರುತ್ತದೆ. ತಂಬಾಕು ಸೇವನೆಯಿಂದಲೂ ಶೇ.40 ರಷ್ಟು ಕಾಯಿಲೆ ಬರುತ್ತದೆ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಗರ್ಭಕೋಶ ಕ್ಯಾನ್ಸರ್, ಗಂಡಸರಲ್ಲಿ ಹೆಚ್ಚು ಗಂಟಲು ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಬರುತ್ತದೆ, ಆದುದರಿಂದ ಫಾಸ್ಟ್ ಪುಡ್, ತಂಬಾಕು ಸೇವನೆಯನ್ನು ನಿಲ್ಲಿಸಿದರೆ ಕ್ಯಾನ್ಸರ್ ತಡೆಯಬಹುದು ಎಂದು ಡಾ. ನಟರಾಜ್ ಹೇಳಿದರು.
ಈ ಸಂದರ್ಭದಲ್ಲಿ ಡಾ. ಚೇತನ್, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ, ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ಗ್ರಾ.ಪಂ. ಸದಸ್ಯ ಡಿ.ಎಂ.ಹರೀಶ್, ಆರೋಗ್ಯ ನಿರೀಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಭಾಗ್ಯಮ್ಮ, ಸಮುದಾಯ ಆರೋಗ್ಯ ಅಧಿಕಾರಿ ಪೂಜಾ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.