ನಿಸಾರರಿಗೊಂದು ನುಡಿ ನಮನ

ನಿಸಾರರಿಗೊಂದು ನುಡಿ ನಮನ

`ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ’ – ಎಂದು ಹೆಮ್ಮೆ ಯಿಂದ ನುಡಿದ ಹಿರಿಯ ಚೇತನ, ಜೋಗ ನನ್ನ ಜೀವನದ ಭಾಗವೆಂಬಂತೆ ನಿತ್ಯ ಭೋರ್ಗರೆವ ಜಲಧಾರೆಯನ್ನು ಪದಗಳ ಮೂಲಕ ಬೆಳದಿಂಗಳು ಹಾಲು ಚೆಲ್ಲಿದಂತೆ ನಿತ್ಯ ಉತ್ಸವದ ಗೀತೆಯಾಗಿ ಜೋಗದ ಸಿರಿ ಬೆಳಕಿನಲಿ ಎಂಬ ಗೀತೆಯನ್ನು ರಚಿಸಿ, 1978 ರಲ್ಲಿ ಕನ್ನಡದ ಮೊಟ್ಟ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆಯಾದ ನಿತ್ಯೋತ್ಸವವನ್ನು ಹೊರತಂದು ಧ್ವನಿ ಸುರುಳಿ ಪರಂಪರೆ ಬೆಳೆಯಲು ಕಾರಣಕರ್ತರು. ಒಬ್ಬ ಕವಿಯಾಗಿ ಮನುಷ್ಯರನ್ನು, ಜೀವನವನ್ನು ಪ್ರೀತಿಸಲು ಕಲಿಸಿದ ಭಾವನಾ ಜೀವಿ. ಕನ್ನಡ ಪದಗಳ ಸ್ಪಷ್ಟ ಉಚ್ಚಾರಣೆಯ ಸಿರಿವಂತರಾದ ಕೊಕ್ಕರೆ ಹೊಸಹಳ್ಳಿ ಶೇಖ್‌ ಹೈದರ್‌ ನಿಸಾರ್‌ ಅಹಮದ್‌, ಅಂದರೆ ಅವರೇ ಕೆ.ಎಸ್‌. ನಿಸಾರ್‌ ಅಹಮದ್‌, ಕನ್ನಡ ಸಾಹಿತ್ಯದ ಅಪರೂಪದ ಪ್ರತಿಭೆ. ನಾಡು-ನುಡಿ ಎಂದಿಗೂ ಮರೆಯದ ಬಹುಮುಖ ಅಭಿವ್ಯಕ್ತಿ.

ಹತ್ತನೇ ವಯಸ್ಸಿನಲ್ಲಿಯೇ ವನಸುಮ ಎಂಬ ಶಾಲೆಯ ಕೈ ಬರಹ ಪತ್ರಿಕೆಯಲ್ಲಿ ಖಾಲಿ ಉಳಿದಿದ್ದ ಸ್ವಲ್ಪ ಜಾಗದಲ್ಲಿ ತಮ್ಮ ಮೊದಲ ಕವನ `ಜಲಪಾತವನ್ನು ಪ್ರಕಟಿಸಿದ ದಿನದಿಂದಲೇ ಅವರ ಸಾಹಿತ್ಯ ಕೃಷಿಯ ಶುಭಾರಂಭ. ಅಂದು ಆರಂಭವಾದ ಈ ಅಭಿಯಾನವು 21 ಕವನ ಸಂಕಲನಗಳು, 14 ವೈಚಾರಿಕ ಕೃತಿಗಳು, 05 ಮಕ್ಕಳ ಸಾಹಿತ್ಯ ಪುಸ್ತಕಗಳು, 5 ಅನುವಾದಿತ ಕೃತಿಗಳು ಮತ್ತು 13 ಸಂಪಾದಿತ ಬರಹಗಳಿಗೂ ಮೂಲ ಕಾರಣ ವಾಯಿತು. ಕವಿ ಗುಂಡಪ್ಪನವರಿಂದ ಪ್ರೇರಿತರಾಗಿ ನವೋದಯ ಹಾಗೂ ನವ್ಯ ಕವಿಯಾಗಿ ಛಾಪು ಮೂಡಿಸಿದ ಚಿಂತಕ.

ಒಮ್ಮೆ ಮೈಸೂರು ಅನಂತಸ್ವಾಮಿಯವರು ತಾವು ನುಡಿಸಿದ ಸಂಗೀತಕ್ಕೆ ಒಂದು ಗೀತೆಯನ್ನು ಬರೆಯಿರಿ ಎಂದು ಹೇಳಿದರಂತೆ. ಆ ಮಾತನ್ನು ಪ್ರೀತಿಯಿಂದಲೇ ಸ್ವೀಕರಿಸಿ ರಚಿಸಿದ ಗೀತೆಯೇ ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ, ಅಲ್ಲದೇ 1968 ರಲ್ಲಿ ಮೈಸೂರು ಅನಂತಸ್ವಾಮಿಯವರು ಆಕಾಶವಾಣಿಗಾಗಿ ನವೆಂಬರ್‌ ತಿಂಗಳಿಗಾಗಿಯೇ ಬರೆದಿದ್ದ ನಿತ್ಯೋತ್ಸವ ಗೀತೆಯನ್ನು ರೇವತಿ ರಾಗದ ಮೂಲಕ ಪ್ರಚಾರ ಮಾಡಿ ಜನಮಾನಸದಲ್ಲಿ ನೆಲೆಸಿರುವಂತೆ ಮಾಡಿದುದಕ್ಕೆ ಸಂದರ್ಶನವೊಂದರಲ್ಲಿ ನಿಸಾರ್‌ ಕೃತಜ್ಞತೆ ಸಲ್ಲಿಸುತ್ತಾ…. ನನ್ನ ಸುಕೃತ ಎಂದಿರುವುದು ಅವರ ದೊಡ್ಡತನಕ್ಕೆ ಸಾಕ್ಷಿಯಾಗಿದೆ.

ನಿಮ್ಮೊಡನಿದ್ದೂ ನಿಮ್ಮಂತಾಗದೆ, ಜಗ್ಗಿದ ಕಡೆ ಬಾಗದೇ, ನಾನು ನಾನೇ ಆಗಿ ಈ ನೆಲದಲ್ಲೇ ಬೇರೂತ್ತಿದ್ದರೂ ಬೀಗಿ ಪರಕೀಯನಾಗಿ ತಲೆ ಎತ್ತುವುದಿದೆ ನೋಡಿ ಅದು ಅತ್ಯಂತ ಕಷ್ಟದ ಕೆಲಸ ಎಂದು ಬರೆಯುತ್ತಾ, ಗೀತೆಗಳಲ್ಲೇ ಭಾವನೆಗಳನ್ನು ಹೊರಹಾಕುತ್ತಿದ್ದರು. ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ ಹೂಡಿ ಬರೆದರು. ಮತ್ತೆ ಹಳೆಯ ನೆನಪೇ ಎನ್ನುತ್ತಾ ಕಳೆದ ಘಟನೆಗಳನ್ನು ಮೆಲುಕು ಹಾಕುತ್ತಿದ್ದ ಮೃದುಜೀವಿ.

ಎಲ್ಲವನೂ ಕಲಿ, ಎಲ್ಲದರೊಂದಿಗೂ ಬೆರೆ ಎಂಬ ಮಾತಿನಂತೆ ವರನಟ ಡಾ. ರಾಜಕುಮಾರ್‌ ಅವರೊಂ ದಿಗೆ ಆತ್ಮೀಯತೆಯ ಒಡನಾಟವಿಟ್ಟು ಕೊಂಡಿದ್ದ ಸ್ನೇಹಜೀವಿ. ಕಣ್ಣಾರೆ ಕಂಡ ಅದಷ್ಟೋ ಸಂಗತಿಗಳನ್ನು ಹಾಳೆಗಿಳಿಸಿದ ಅನುಭಾವಿಯೂ ಆದ ಇವರು ರಾಜ್ಯೋತ್ಸವ, ನಾಡೋಜ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳ ಪುರಸ್ಕೃತರು, ಅಲ್ಲದೇ ಇವರು ಶ್ರೇಷ್ಟ ಅನು ವಾದಕರೂ ಲೇಖನ ಕರ್ತರೂ ಆಗಿ ಹೊರಹೊಮ್ಮಿ ರುವುದು ಹೆಮ್ಮೆಯ ವಿಷಯವೇ ಸರಿ. ಅಲ್ಲದೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾದದ್ದು ಮತ್ತು ಮೈಸೂರು ದಸರಾ ಉದ್ಘಾಟನೆಯನ್ನು ನೆರವೇರಿಸಿರುವುದು ಹೆಗ್ಗಳಿಕೆಯ ವಿಚಾರ.

ಇಂದಿಗೂ ಈ ಸಾಧಕ, ಸಾರ್ಥಕ ಮನದ ಮಾತು ಗೀತೆಗಳು ನಿತ್ಯ ಉತ್ಸವವಾಗಿ ಜರುಗುತ್ತಾ…  ಅವರ ಇರುವನ್ನು ಜೀವಂತಗೊಳಿಸಿವೆ. ಇಂದವರ ಜನುಮ ದಿನ ನಿಸಾರರೇ ನಿಮಗಿದೋ ಅರ್ಪಣೆ ನನ್ನ ನುಡಿ ನಮನ.

ಶ್ರೀಮತಿ ಉಷಾ ಇ., ಕನ್ನಡ ಉಪನ್ಯಾಸಕರು, ಎಸ್‌.ಎ.ಜಿ.ಬಿ. ಸಂ.ಪ.ಪೂ ಕಾಲೇಜು, ದಾವಣಗೆರೆ. ಮೊ: 9844572738

error: Content is protected !!