ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : 20 ವರ್ಷ ಕಾರಾಗೃಹ ಶಿಕ್ಷೆ

ದಾವಣಗೆರೆ, ಫೆ.1- 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಆರೋಪಿಗೆ ನಗರದ ವಿಶೇಷ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಇಂದು ಆದೇಶ ಹೊರಡಿಸಿದೆ.

ಹರಿಹರದ ನಾರಾಯಣ ಆಲಿಯಾಸ್ ಶ್ಯಾಮ್ ಎಂಬಾತನೇ ಶಿಕ್ಷೆಗೊಳಗಾದ ಆರೋಪಿ. ಹರಿಹರೇಶ್ವರ ದೇವಸ್ಥಾನದ ರಸ್ತೆಯಲ್ಲಿ ವಾಸಿಸುತ್ತಿದ್ದ ಅಪ್ರಾಪ್ತ ಸಂತ್ರಸ್ಥೆಯನ್ನು ಪುಸಲಾಯಿಸಿ, ನಂಬಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ನ್ಯಾಯಾಲಯವು ಈ ಶಿಕ್ಷೆ ವಿಧಿಸಿದೆ. ಕಳೆದ 2020ರ ಆಗಸ್ಟ್ 27 ರಂದು  ನಡೆದ ಈ ಘಟನೆಗೆ ಸಂಬಂಧಿಸಿದಂತೆ ಹರಿಹರ ನಗರ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯ ತಾಯಿ ದೂರು ಸಲ್ಲಿಸಿದ್ದರು.  

ದಾವಣಗೆರೆ ಜಿಲ್ಲಾ ಮತ್ತು ಸತ್ರ ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ಶ್ರೀಪಾದ್ ಅವರು ಆರೋಪಿತನ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 30 ಸಾವಿರ ರೂ.ಗಳ ದಂಡ ವಿಧಿಸಿದೆ. ಹಾಗೂ ಒಂದು ವೇಳೆ ದಂಡ ತಪ್ಪಿದಲ್ಲಿ ಮತ್ತೆ 2 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.  ಇದರ ಜೊತೆಗೆ ಪರಿಹಾರದ ರೂಪದಲ್ಲಿ 5 ಲಕ್ಷ ರೂಗಳ ಹಣವನ್ನು ಸಂತ್ರಸ್ಥೆಗೆ  ನೀಡುವಂತೆ  ಜಿಲ್ಲಾ ಉಚಿತ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ರೇಖಾ ಎಸ್. ಕೋಟೆಗೌಡರ್ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ್ದರು. ಪ್ರಕರಣದ ತನಿಖೆಯನ್ನು ಹರಿಹರ ನಗರ ಪೊಲೀಸ್ ಠಾಣೆಯ ತನಿಖಾಧಿಕಾರಿ ಎಂ.ಶಿವಪ್ರಸಾದ್ ನಡೆಸಿದ್ದರು.

error: Content is protected !!