ಪರಿಶಿಷ್ಟ ಜಾತಿ, ಪಂಗಡದವರು ಸಂವಿಧಾನದ ಹಕ್ಕುಗಳನ್ನು ಪಡೆಯಲು ಸಾಂಘಿಕವಾಗಿ ಒಟ್ಟಾಗಿ ಹೋರಾಡುವ ಅನಿವಾರ್ಯತೆ ಎದುರಾಗಿದೆ

ಪರಿಶಿಷ್ಟ ಜಾತಿ, ಪಂಗಡದವರು ಸಂವಿಧಾನದ ಹಕ್ಕುಗಳನ್ನು ಪಡೆಯಲು ಸಾಂಘಿಕವಾಗಿ ಒಟ್ಟಾಗಿ ಹೋರಾಡುವ ಅನಿವಾರ್ಯತೆ ಎದುರಾಗಿದೆ

ಹರಪನಹಳ್ಳಿ : 5ನೇ ವರ್ಷದ ವಾಲ್ಮೀಕಿ ಜಾತ್ರೆಯ ಭಿತ್ತಿ ಚಿತ್ರ ಪ್ರದರ್ಶನದಲ್ಲಿ ಸಂಸದ ವೈ.ದೇವೇಂದ್ರಪ್ಪ

ಹರಪನಹಳ್ಳಿ, ಜ.29- ಭಾರತೀಯ ಸಂಸ್ಕೃತಿಗೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೇ ಸಾರಿದ ಆದಿಕವಿ, ದಾರ್ಶನಿಕ ಮಹರ್ಷಿ ವಾಲ್ಮೀಕಿಯವರ  ಆದರ್ಶಗಳನ್ನು ಹಾಗೂ ಭಾರತದ ಶೋಷಿತ ಸಮುದಾಯಗಳಿಗೆ ಧ್ವನಿ ನೀಡಿದ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ಬದ್ದರಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಸಂವಿಧಾನದ ಹಕ್ಕುಗಳನ್ನು ಪಡೆಯಲು ಸಾಂಘಿಕವಾಗಿ ಒಟ್ಟಾಗಿ ಹೋರಾಡುವ ಅನಿವಾರ್ಯತೆ ಎದುರಾಗಿದೆ ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು.

ತಾಲ್ಲೂಕಿನ ಅರಸಿಕೇರಿ ಗ್ರಾಮದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ 5ನೇ ವರ್ಷದ ವಾಲ್ಮೀಕಿ ಜಾತ್ರೆಯ ಭಿತ್ತಿ ಚಿತ್ರ ಪ್ರದರ್ಶನ ಮಾಡಿ ಮಾತನಾಡಿದರು.

ವಾಲ್ಮೀಕಿ ನಾಯಕ ಸಮಾಜ ಧಾರ್ಮಿಕ ತಳಹದಿಯ ಮೇಲೆ ವಾಲ್ಮೀಕಿ ಜಾತ್ರೆ ನೆಪದಲ್ಲಿ ಜನ ಜಾಗೃತಿಯಾಗಬೇಕಿದೆ. ರಾಜ್ಯದ 175 ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ, ಜಾತ್ರೆಗೆ ಆಹ್ವಾನ ನೀಡುವ ಮೂಲಕ ರಾಜ್ಯದ 4ನೇ ಅತಿ ದೊಡ್ಡ ಸಮಾಜವನ್ನು ಜಾಗೃತಿ ಮೂಡಿಸುವ ಕೆಲಸ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾಡುತ್ತಿದ್ದಾರೆ. 

ಪಾಳೇಗಾರರು ಉಪಯೋಗಿಸುತ್ತಿದ್ದ ಕತ್ತಿ, ಗುರಾಣಿ, ಬಿಲ್ಲುಗಳನ್ನು ಪೂಜೆಗೆ ಮಾತ್ರ ಇಟ್ಟುಕೊಂಡು, ಪೆನ್ನು, ಪೇಪರ್‌ಗಳನ್ನು ಹಿಡಿದು ಅಭ್ಯಾಸ ಮಾಡಿ ಸಾಧನೆ ಮಾಡಬೇಕು. ಜವಾಬ್ದಾರಿಯಿಂದ, ಕಷ್ಟ ಪಟ್ಟು ಓದಿದರೆ ರಾಜ – ರಾಣಿಯರಂತೆ ಬದುಕಬಹುದು ಎಂದರು.

ವಾಲ್ಮೀಕಿ ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷ ವೈ.ಡಿ.ಅಣ್ಣಪ್ಪ ಮಾತನಾಡಿ, ರಾಜ ಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಹಿನ್ನೆಲೆಯಲ್ಲಿ ಮಠದಲ್ಲಿ ಜಾತ್ರೆ ಆಯೋಜಿಸಿ, ಸಮುದಾಯವನ್ನು ಜಾಗೃತಿಗೊಳಿಸಲಾಗು ತ್ತಿದೆ. ಕಳೆದ 4 ಜಾತ್ರೆಗಳಲ್ಲಿ ಸಮಾಜದ ಬಂಧುಗಳು ನಿರೀಕ್ಷೆಗೂ ಮೀರಿ ಆರ್ಥಿಕ ನೆರವು ಹಾಗೂ ಬೆಂಬಲ ನೀಡಿದ್ದಾರೆ. ಈ ಬಾರಿ ಕೂಡ ಜಾತ್ರೆ ಯಶಸ್ವಿಯಾಗಲು ನಿಮ್ಮ ಸಹಕಾರ ಅಗತ್ಯವಾಗಿದೆ ಎಂದರು.

ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಹಿಂದುಳಿದ ಜಾತಿ – ಜನಾಂಗದವರು ಶಿಕ್ಷಣದಿಂದ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಸಮಾಜದಲ್ಲಿರುವ ಮೂಢನಂಬಿಕೆ,  ಬಾಲ್ಯವಿವಾಹಗಳು ಕಡಿಮೆಯಾಗವುದಕ್ಕೆ ಶಿಕ್ಷಣ ಬಹುಮುಖ್ಯವಾಗಿದೆ. 

ಮಠದ ಆದೇಶ ಬಂದಾಗ ಪರಿಶಿಷ್ಟ ಪಂಗಡದ ಬಂಧುಗಳು ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಇದ್ದು, ಸಮಾಜ ಬಾಂಧವರು ಪಕ್ಷ ಭೇದ ಮರೆತು ಸಂಘಟಿತರಾಗಬೇಕಾಗಿದೆ ಎಂದರು.

ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಘಟಕದ ಗೌರವ ಅಧ್ಯಕ್ಷರಾದ ಟಿ.ಪದ್ಮಾವತಿ, ನಿವೃತ್ತ ಮುಖ್ಯ ಶಿಕ್ಷಕರಾದ ಆನಂದಪ್ಪ, ಅಂಜಿನಪ್ಪ, ರೇವಣಸಿದ್ದಪ್ಪ,  ಪ್ರಶಾಂತ್‌ ಪಾಟೀಲ್, ಬಾಲೇನಹಳ್ಳಿ ಕೆಂಚನಗೌಡ, ಕಬ್ಬಳ್ಳಿ ಬಸವರಾಜ, ನ್ಯಾಯವಾದಿಗಳಾದ ವೈ.ಟಿ.ಕೋಟ್ರೇಶ್‌, ಜಿಟ್ಟಿನಕಟ್ಟಿ ಮಂಜುನಾಥ್‌,  ಮಹಾತೇಂಶ್‌ ಹರಿಯಮ್ಮನಹಳ್ಳಿ, ಮೈದೂರು ಮಾರುತಿ, ಕಣಿವಿಹಳ್ಳಿ ಮಂಜುನಾಥ, ಶಾಲಿನಿ, ಮಂಜುಳಾ, ಪವಿತ್ರ, ಶೋಭಾ ಸೇರಿದಂತೆ ಇತರರು ಇದ್ದರು.

error: Content is protected !!