ಕುಸುಮ ರೋಗಿಗಳಿಗೆ ಹೆಚ್ಚಿನ ಶುಶ್ರೂಷೆ ಅವಶ್ಯ

ಕುಸುಮ ರೋಗಿಗಳಿಗೆ ಹೆಚ್ಚಿನ ಶುಶ್ರೂಷೆ ಅವಶ್ಯ

ಹಿಮೋಪಿಲಿಯಾ ವೈದ್ಯಕೀಯ ಕಾರ್ಯಾಗಾರದಲ್ಲಿ ಕಿರುವಾಡಿ ಗಿರಿಜಮ್ಮ ಅಭಿಮತ

ದಾವಣಗೆರೆ, ಫೆ.1- ಕುಸುಮ ರೋಗಿಗಳ ಶುಶ್ರೂಷೆ, ಇವರಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಶುಶ್ರೂಷಕರ ಅವಶ್ಯಕತೆ ಇದೆ ಎಂದು ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ ಹೇಳಿದರು.

ನಗರದ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸಭಾಂಗಣದಲ್ಲಿ ಹಿಮೋಪಿಲಿಯಾ ಸೊಸೈಟಿ ದಾವಣ ಗೆರೆ,  ನ್ಯಾಷನಲ್ ಹೆಲ್ತ್  ಮಿಷನ್ ರಾಜ್ಯ ಬ್ಲಡ್ ಸೆಲ್ ಬೆಂಗಳೂರು, ಜಜಮು ವೈದ್ಯಕೀಯ ಮಹಾವಿದ್ಯಾಲ ಯಗಳ ಸಹಯೋಗದಲ್ಲಿ  ಹಮ್ಮಿಕೊಂಡಿದ್ದ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ತಜ್ಞರ ಕೌಶಲ್ಯಾಭಿವೃದ್ಧಿ ರಾಜ್ಯಮಟ್ಟದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಸುಮ ರೋಗಿಗಳ ಆರೈಕೆ, ಕಾಳಜಿ ಅತ್ಯಂತ ಮುಖ್ಯ. ರೋಗ ವಾಸಿ ಮಾಡಲು ಬೇಕಾದ ಚಿಕಿತ್ಸೆಯನ್ನು ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು ಸಲಹೆ ನೀಡಿದರು.

ದಾವಣಗೆರೆಯಲ್ಲಿ ಚಿಕ್ಕದಾಗಿ ಆರಂಭವಾದ ಹಿಮೋಪಿಲಿಯಾ ಸೊಸೈಟಿಯು ಇಂದು ಸುಸಜ್ಜಿತ ಆಸ್ಪತ್ರೆಯನ್ನು ಹೊಂದುವ ಮೂಲಕ ಅಭಿವೃದ್ಧಿ ಹೊಂದಿದೆ. ಇದಕ್ಕೆ ಡಾ. ಸುರೇಶ್ ಹನಗವಾಡಿ ಮತ್ತವರ ಬಳಗದ ಪರಿಶ್ರಮ ಕಾರಣವಾಗಿದೆ. ಅಂಗವಿಕಲತೆಯ ಲಕ್ಷಣಗಳಿರುವ ಮಕ್ಕಳೂ ಸಹ ಕುಸುಮ ರೋಗಕ್ಕೆ ಸೂಕ್ತ ಚಿಕಿತ್ಸೆಯಿಂದ ಗುಣಮುಖರಾಗಿ ಸಮಾಜದಲ್ಲಿ ಒಳ್ಳೆಯ ಶಿಕ್ಷಣದ ಪಡೆದು ಸರ್ಕಾರಿ ಹುದ್ದೆಗಳನ್ನು ಪಡೆದ ಉದಾಹರಣೆಗಳೂ ಕೂಡ ಇವೆ ಎಂದರು.

ಹಿಮೋಪಿಲಿಯಾ ಪೀಡಿತರ ನೋವು, ಅವರು ಪಡುವ ಪಾಡು ಹೇಳತೀರದು. ಕರುಳು ಕಿವುಚುವಂತಹ ಪರಿಸ್ಥಿತಿಯನ್ನು ರೋಗಿಗಳಲ್ಲಿ ಕಂಡಿದ್ದೇವೆ. ಇವರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಗುಣಮುಖರನ್ನಾಗಿ ಮಾಡುವ ಹೊಣೆ ವೈದ್ಯರು ಮತ್ತು ಸಿಬ್ಬಂದಿಯವರದ್ದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಎನ್‌ಹೆಚ್ಎಂ ರಾಜ್ಯ ರಕ್ತನಿಧಿ ಉಪನಿರ್ದೇ ಶಕರೂ, ನೋಡಲ್ ಅಧಿಕಾರಿಗಳಾದ ಡಾ. ಎನ್. ಶಕೀಲಾ ಮಾತನಾಡಿ, ಹಿಮೋಪಿಲಿಯಾ ಸೊಸೈಟಿಯು ಉತ್ತಮ ತರಬೇತಿಯನ್ನು ಆಯೋಜನೆ ಮಾಡಿರುವುದು ಸಂತೋಷದ ವಿಷಯ. ರೋಗಿಗಳಿಗೆ ಉತ್ತಮ ಚಿಕಿತ್ಸೆ, ಆಪ್ತಸಮಾಲೋಚನೆ ಮಾಡುವ ಸೊಸೈಟಿ ಸೇವಾ ಕಾರ್ಯ ಶ್ಲ್ಯಾಘನೀಯ ಎಂದರು.

ಶಿಬಿರಾರ್ಥಿಗಳು ತರಬೇತಿಯ ಸದುಪಯೋಗ ಪಡೆದು, ಮುಂದಿನ ಕಾರ್ಯಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಂಸ್ಥೆಯ ಉಪನಿರ್ದೇಶಕಿ ಡಾ. ಸಂಗೀತ ಕೋಡಕಣಿ, ಜಜಮು ವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಸುರೇಶ್ ಹನಗವಾಡಿ ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್, ಚಿಗಟೇರಿ ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ. ಷಣ್ಮುಖಪ್ಪ, ಕರ್ನಾಟಕ ಹಿಮೋಪಿಲಿಯಾ ಉಪಾಧ್ಯಕ್ಷ ಡಾ. ಜಿ. ತಿಪ್ಪೇಸ್ವಾಮಿ, ಡಾ. ಮುರುಳಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!