ದಾವಣಗೆರೆ, ಜ. 26 – ಬಿಜೆಪಿಗೆ ವಲಸೆ ಬಂದ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ತಳ್ಳಿ ಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷಕ್ಕೆ ಬಂದವರಿಗೆ ಎಲ್ಲರೂ ಬೆಂಬಲಿಸುತ್ತಿದ್ದೇವೆ ಎಂದಿದ್ದಾರೆ.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ವಲಸಿಗರಿಗೆ ಏನು ಕಡಿಮೆ ಮಾಡಿದ್ದೇವೆ? ಇನ್ನೂ ಏನು ಮಾಡಬೇಕು? ಎಂದು ಮರು ಪ್ರಶ್ನಿಸಿದರು.
ಬಿಜೆಪಿ ವಲಸಿಗರ ಪಕ್ಷವಾಗಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿರುವುದಕ್ಕೆ ತಿರುಗೇಟು ನೀಡಿದ ಕಟೀಲ್, ಸಿದ್ದರಾಮಯ್ಯ ಅವರೇ ವಲಸಿಗ. ಅವರು ಜೆಡಿಎಸ್ ಮುರಿದು ಹೋಗಿದ್ದಾರೆ. ತಮ್ಮ ಗುರುವಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಅಡ್ಡ ಹಾಕಿ ಹೋಗಿದ್ದಾರೆ, ಈಗ ಕಾಂಗ್ರೆಸ್ ಮುಗಿಸುತ್ತಿದ್ದಾರೆ. ಅವರಿಗೆ ವಲಸಿಗರ ಕುರಿತು ಮಾತನಾಡಲು ನೈತಿಕ ಹಕ್ಕಿಲ್ಲ ಎಂದರು.
ಕಾಂಗ್ರೆಸ್‌ನಿಂದ ನಾಯಕರು ವಲಸೆ ಬರಲಿದ್ದಾರೆಯೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾದು ನೋಡಿ ಕಾಂಗ್ರೆಸ್ ಮನೆ ಖಾಲಿ ಆಗಲಿದೆ ಎಂದರು.
ಮುಂದಿನ ಚುನಾವಣೆಯನ್ನು ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುವುದು ಎಂದವರು ಹೇಳಿದರು.
ಯಡಿಯೂರಪ್ಪ ಅವರ ಜೊತೆ ನಡೆಯುವುದಾಗಿ 70 ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಚುನಾವಣಾ ಸಮಯ. ಶಾಸಕರು ಏನು ಹೇಳಿದ್ದಾರೆ ಎಂಬುದು ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಹೇಳಿದರು.