ನಾನು ಯಾರು? ಏಕೆ ಬಂದೆ? ಎಂಬುದನ್ನರಿತರೆ ಭವ ರೋಗದಿಂದ ಮುಕ್ತಿ : ತೆಲಗಿ ಶ್ರೀಗಳು

ನಾನು ಯಾರು? ಏಕೆ ಬಂದೆ? ಎಂಬುದನ್ನರಿತರೆ ಭವ ರೋಗದಿಂದ ಮುಕ್ತಿ : ತೆಲಗಿ ಶ್ರೀಗಳು

ರಾಣೇಬೆನ್ನೂರು, ಜ. 27- ಕಣ್ಣಿಗೆ ಕಾಣುವ ಆಸ್ತಿ-ಅಂತಸ್ತು, ಸಿರಿ-ಸಂಪತ್ತು ಕೇಳಿದರೆ ಭವರೋಗದಿಂದ ಬಿಡುಗಡೆ ಹೊಂದಲು ಸಾಧ್ಯವಿಲ್ಲ. ನಾನು ಯಾರು? ಏಕೆ ಬಂದೆ? ಎನ್ನುವುದನ್ನು ಅರಿತರೆ ಭವರೋಗದಿಂದ ಮುಕ್ತಿ ಸಾಧ್ಯವಾಗಲಿದೆ ಎಂದು ತೆಲಗಿ ಶಂಭುಲಿಂಗಾಶ್ರಮದ ಶ್ರೀ ಪೂರ್ಣಾನಂದ ಮಹಾಸ್ವಾಮಿಗಳು ನುಡಿದರು.

ಶ್ರೀಗಳು ರಾಣೇಬೆನ್ನೂರು ಸಿದ್ದಾರೂಢ ಮಠದಲ್ಲಿ ನಡೆದ ವೇದಾಂತ ಪರಿಷತ್‌ನ ಸಮಾರೋಪ ಸಮಾರಂಭದಲ್ಲಿ ಜ್ಞಾನ ಪ್ರತಿಪಾದನಾ ಸ್ಥಲ 28ನೇ ಪದದ ತನ್ನನೇ ಪರವೆಂದು ತಿಳಿವುದಲ್ಲದೇ ಬೇರೆ ಬಿನ್ನವಿಟ್ಟ ರಸಲೇನುಂಟು ಕಾಣಿಸಲು ವಿಷಯ ಕುರಿತು ಉಪದೇಶ ನೀಡಿದರು.

ನಮ್ಮನ್ನು ನಾವು ಅರಿಯಬೇಕು. ಪರಿಪೂರ್ಣ ಅರಿವು ಪಡೆದರೆ ಹಂಸಕ್ಷೀರ ನ್ಯಾಯದಿಂದ ಸಮರ್ಥ ಬದುಕು ಸಾಗಿಸಲು ಸಾಧ್ಯ. ಅದು ಸಾಧು-ಸಂತರ, ಮಠ-ಮಂದಿರಗಳ ಸಂಪರ್ಕದಿಂದ ಪಡೆಯಲು ಸಾಧ್ಯ ಎಂದು ಹುಬ್ಬಳ್ಳಿ ಸಿದ್ಧಾರೂಢ ಮಠದ ಸಚ್ಚಿದಾನಂದ ಮಹಾಸ್ವಾಮಿಗಳು ಸಮಾರೋಪದ ಉಪದೇಶದಲ್ಲಿ ನುಡಿದರು.

ಗುರು ಬೋಧನೆ ದೊರಕದೇ ಹತ್ತಾರು ಗ್ರಂಥಗಳನ್ನು ಪಠಿಸಿದರೆ ಕೈವಲ್ಯ ದೊರಕಲಾರದು. ಹಾಲಿನಲ್ಲಿ ತುಪ್ಪವಿದ್ದರೂ ದೊರಕಲಾರದು. ಹಾಲಿಗೆ ಸಂಸ್ಕಾರ ನೀಡಿದರೆ ತುಪ್ಪ ದೊರಕಲಿದೆ. ಅದರಂತೆ ಅಕ್ಷರ ಜ್ಞಾನವಿದ್ದರೂ ಸಹ ಮಹಾತ್ಮರು ಕೊಡುವ ಸಂಸ್ಕಾರದಿಂದ ಮಾತ್ರ ಪದವಿಗಳನ್ನು ಪಡೆಯಬಹುದು.ಆಗ ನಾನ್ಯಾರು ಎನ್ನುವ ಅರಿವು ಸಾಧಿಸಲು ಸಾಧ್ಯವೆಂದು ಪೀಠಾಧಿಪತಿ ಮಲ್ಲಯ್ಯಜ್ಜ ಉಪದೇಶಿಸಿದರು.

ಸೌಟಗಿ ಲಿಂಗಯ್ಯ ಶ್ರೀಗಳು, ಹುಬ್ಬಳ್ಳಿ ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು, ರಾಯಚೂರು ಸಚ್ಚಿದಾನಂದ ಶ್ರೀ, ಮಲ್ಲಿಕಾರ್ಜುನ ದೇವರು ಪಾಲ್ಗೊಂಡಿದ್ದರು.

ದೇವೇಂದ್ರಪ್ಪ ಸ್ವಾಗತಿಸಿ, ನಿರೂಪಿಸಿದರು. ಬಸವರಾಜ ಹಳ್ಳಳ್ಳಿ, ಪೂರ್ಣಿಮಾ ಅಯ್ಯನಗೌಡ್ರ, ರೇವಣ್ಣ, ಭೀಮರೆಡ್ಡಿ ಹಾದಿಮನಿ, ಶಿವಪ್ಪ ಕುರುವತ್ತಿ, ಪೂರ್ಣಿಮಾ ಕುರುವತ್ತಿ, ಅಕ್ಕಮ್ಮ ಹಳ್ಳಳ್ಳಿ ಉಪಸ್ಥಿತರಿದ್ದರು.

error: Content is protected !!