ಕಂದನಕೋವಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಕಂದನಕೋವಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ದಾವಣಗೆರೆ, ಜ.27- ತಾಲ್ಲೂಕಿನ ಅಣಜಿ ಹೋಬಳಿ ವ್ಯಾಪ್ತಿಯ ಕಂದನಕೋವಿಯಲ್ಲಿ  ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಕಂದನಕೋವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅದ್ಧೂರಿಯಾಗಿ  ಆಚರಿಸಲಾಯಿತು. 

ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಅಂಬಣ್ಣ  ಮಾತನಾಡಿ, ಎಲ್ಲಾ ಮಕ್ಕಳೂ ಈ ಹಬ್ಬದ ಪ್ರಯೋಜನ ಪಡೆದು ಇಲ್ಲಿ ಕಲಿಸುವ ಕಲಾತ್ಮಕ ಚಟುವಟಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಸಮೂಹ ಸಂಪನ್ಮೂಲ ವ್ಯಕ್ತಿ ಹೆಚ್.ಎಸ್.ಅಶೋಕ್ ಮಾತನಾಡಿ, 4ರಿಂದ 9ನೇ ತರಗತಿ ಮಕ್ಕಳಿಗಾಗಿ ಈ ಕಲಿಕಾ ಹಬ್ಬ ನಡೆಸುತ್ತಿದ್ದು ಇದು ಸರ್ಕಾರದ ವಿನೂತನ ಪ್ರಯತ್ನ ಎಂದು ತಿಳಿಸಿದರು. 

ಮೊದಲಿಗೆ ಊರಿನ ಆಂಜನೇಯ ದೇವಸ್ಥಾನದಿಂದ ಪೂರ್ಣ ಕುಂಭಮೇಳವನ್ನು ಡೊಳ್ಳು ಕುಣಿತ, ನಂದಿಕಂಬ ಕುಣಿತ, ಲಂಬಾಣಿ ನೃತ್ಯದ ಮೂಲಕ ಪ್ರೌಢಶಾಲೆಯ ಆವರಣಕ್ಕೆ ತರಲಾಯಿತು. ಊರಿನ ನಾಗರಿಕರು, ಎಲ್ಲಾ 16 ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ಎರಡೂ ದಿನ ಹಬ್ಬಕ್ಕಾಗಿ ಸಿಹಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಶಾಲಾ ಆವರಣವನ್ನು ತಳಿರು ತೋರಣ ಗಳಿಂದ ಸಿಂಗರಿಸಲಾಗಿತ್ತು. ಕ್ಷೇತ್ರ ಸಮನ್ವಯಾಧಿಕಾರಿ ಪಸೀಹ್ ಉದ್ದೀನ್ ಶಾಕೀರ್, ಸಮೂಹ ಸಂಪನ್ಮೂಲ ವ್ಯಕ್ತಿ ಹೆಚ್.ಎಸ್. ಅಶೋಕ್, ಗ್ರಾ.ಪಂ ಸದಸ್ಯರು ಮತ್ತು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಪದಾಧಿಕಾರಿಗಳು  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಆರ್. ಬಸವರಾಜಪ್ಪ  ಅಧ್ಯಕ್ಷತೆ ವಹಿಸಿದ್ದರು. 

error: Content is protected !!