ರೈತರು, ಕಾರ್ಮಿಕರನ್ನು ಕೆಣಕುವ ಸರ್ಕಾರಗಳಿಗೆ ಉಳಿಗಾಲವಿಲ್ಲ

 ರೈತ, ಕಾರ್ಮಿಕ ಮುಖಂಡರ ಎಚ್ಚರಿಕೆ

ದಾವಣಗೆರೆ, ಸೆ. 28 – ರೈತರು, ಕಾರ್ಮಿಕರು ಹಾಗೂ ದಲಿತರನ್ನು ಕೆಣಕುವ ಸರ್ಕಾರಗಳಿಗೆ ಉಳಿಗಾಲವಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ  ರೈತ ಹಾಗೂ ಕಾರ್ಮಿಕ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ, ಸಿಪಿಐ ಇತರೆ ಸಂಘಟನೆಗಳ ಸಹಯೋಗದಲ್ಲಿ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಚಾಮರಾಜಪೇಟೆ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿರುವ ಹಲವು ಮುಖಂಡರು, ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ಕೈಬಿಡದಿದ್ದರೆ, ರೈತರು ಎಂಥದ್ದೇ ಹೋರಾಟಕ್ಕೂ ಸಜ್ಜಾಗಲಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ತೇಜಸ್ವಿ ಪಟೇಲ್ ಎಚ್ಚರಿಸಿದ್ದಾರೆ.

ಮನ್ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಕೇವಲ ತಮ್ಮ ಮಾತುಗಳನ್ನು ಹೇಳುವ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರ, ರೈತ-ಕಾರ್ಮಿಕರ ಮನದ ಮಾತುಗಳನ್ನೂ ಆಲಿಸಲಿ ಎಂದು ಆಗ್ರಹಿಸಿದರು. 

ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ದೇಶದಲ್ಲಿ ರೈತರ ಜತೆಗೆ ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 

ನಮ್ಮ ಹೋರಾಟದ ಉದ್ದೇಶ ಸರ್ಕಾರಗಳ ಸೊಕ್ಕು ಅಡಗಿಸುವುದಾಗಿದೆ ಎಂದರು. 

ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ಖರೀದಿಸುವ ವರ್ತಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸರ್ಕಾರ ಮುಂದಾಗಬೇಕಿತ್ತು ಎಂದರಲ್ಲದೇ, ರೈತರ ವ್ಯಾಜ್ಯಗಳನ್ನು ಸುಲಭವಾಗಿ ಪರಿಹರಿಸುವ ಅಂಶಗಳಿಗೆ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿಗಳಲ್ಲಿ ಇದಕ್ಕೆ ಅವಕಾಶ ನೀಡಿಲ್ಲ ಎಂದು ಆಕ್ಷೇಪಿಸಿದರು. 

ಎ.ಐ.ಎಂ.ಎಸ್‌.ಎಸ್. ರಾಜ್ಯ ಘಟಕದ ಅಧ್ಯಕ್ಷೆ ಬಿ.ಆರ್.ಅಪರ್ಣಾ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಅನೇಕ ಕಾರ್ಖಾನೆಗಳು ಉದ್ಯೋಗ ನಾಶವಾಗಿದೆ. 

ಇಂತಹ ಸಂದರ್ಭದಲ್ಲಿ ಪಿತೂರಿ ಮಾಡಿ ತಿದ್ದುಪಡಿಗಳನ್ನು ತರುವುದು ಅಗತ್ಯವಿರಲಿಲ್ಲ ಎಂದರು. 

ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಕೈದಾಳೆ ಮಂಜುನಾಥ್ ಮಾತನಾಡಿ, ಸರ್ಕಾರ ಏಕಪಕ್ಷೀಯವಾಗಿ ಕಾಯ್ದೆಗಳ ಬದಲಾವಣೆಗೆ ಕೈ ಹಾಕಿದ್ದು ಇದರಿಂದ ರೈತರು, ಕಾರ್ಮಿಕರು ಮಾತ್ರವಲ್ಲದೆ ಜನಸಾಮಾನ್ಯರ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಹೇಳಿದರು. 

ಮುಖಂಡರಾದ ಹೆಚ್.ಜಿ.ಉಮೇಶ್, ಕೆ.ಭಾರತಿ, ನೀರ್ಥಡಿ ತಿಪ್ಪೇಸ್ವಾಮಿ, ಗುಮ್ಮನೂರು ಬಸವರಾಜ್, ತಿಪ್ಪೇಶನಾಯ್ಕ, ಆವರಗೆರೆ ವಾಸು ಸೇರಿದಂತೆ ಎಐಡಿಎಸ್‌ಒ, ಎಐಡಿವೈಒ, ಎಐಕೆಎಸ್, ಆರ್‌ಕೆಎಸ್, ಎಐಎಂಎಸ್‌ಎಸ್ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

error: Content is protected !!