ದೇಶದ 3 ಹಾಗೂ ರಾಜ್ಯದ 2 ನೇ ಅತ್ಯುತ್ತಮ ಯೋಜನೆ
ರಾಣೇಬೆನ್ನೂರು, ಸೆ. 28- ನನ್ನ ಕ್ಷೇತ್ರದ ರಾಣೇಬೆನ್ನೂರು ನಗರದಲ್ಲಿ ಕೈಗೊಳ್ಳಲಾಗಿರುವ 24×7 ಕುಡಿಯುವ ನೀರು ಸರಬರಾಜು ಯೋಜನೆ ದೇಶದಲ್ಲಿ 3 ನೇ ಹಾಗೂ ರಾಜ್ಯದಲ್ಲಿ 2ನೇ ಅತ್ಯುತ್ತಮ ಯೋಜನೆಯಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಇಂದು ಬೆಳಿಗ್ಗೆ ಅಧಿಕಾರಿಗಳ ಜೊತೆ ಕಾಮಗಾರಿ ವೀಕ್ಷಿಸಿ ನಂತರ ತಮ್ಮನ್ನು ಭೇಟಿಯಾದ ಪತ್ರಕರ್ತ ರೊಂದಿಗೆ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಪುರಸ್ಕೃತ ಅಮೃತ್ ಯೋಜನೆಯ 118 ಕೋಟಿ ವೆಚ್ಚದ ಈ ಕಾಮಗಾರಿ ಶೇ. 90 ರಷ್ಟು ಮುಗಿದಿದೆ. ಈ ಯೋಜನೆಯಿಂದ ನಗರದಾದ್ಯಂತ ಹಾಳಾಗಿರುವ ರಸ್ತೆ ಮುಂತಾದವುಗಳನ್ನು ನಗರಸಭೆ ರಿಪೇರಿ ಮಾಡಲಿದ್ದು, 5 ನೇ ವಿಭಾಗ ದಲ್ಲಿನ ಎರಡು ರಸ್ತೆಗಳನ್ನು ಹೊಸದಾಗಿ ಮಾಡುವ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ಕೊಡಲಾಗಿದೆ ಎಂದು ಶಾಸಕರು ಹೇಳಿದರು.
ಧರಣಿ ಬೇಕಿರಲಿಲ್ಲ : ಶಾಸಕ ಪೂಜಾರ್
24×7 ನೀರು ಸರಬರಾಜು ಕಾಮಗಾರಿ ಎಲ್ಲಿ ಕಳಪೆ ಆಗಿದೆ ಎಂಬುದನ್ನು ತೋರಿಸಿದರೆ ಅದನ್ನು ಸರಿಪಡಿಸಬಹುದು. ನನ್ನ ನಗರ ಸಂಚಾರ ಸಂದರ್ಭದಲ್ಲಿ ಕೆಲ ಸದಸ್ಯರು, ಸಾರ್ವಜನಿಕರು ನನ್ನ ಗಮನಕ್ಕೆ ತಂದ ನ್ಯೂನತೆಗಳನ್ನು ಸರಿಮಾಡಿಸಿದ್ದೇನೆ.
ಈ ಸದಸ್ಯರು ಸಹ ಕಳಪೆ ಕಾಮಗಾರಿ ಎಲ್ಲಿ ನಡೆದಿದೆ ಎಂಬುದನ್ನು ಹೇಳಿದರೆ ಗುತ್ತಿಗೆದಾರರಿಗೆ ಹೇಳಿ ಸರಿಪಡಿಸಬಹುದು. ಇದಕ್ಕಾಗಿ ಧರಣಿ ಅನಾವಶ್ಯ ಎಂದು ನಗರಸಭೆ ಎದುರು ಕೆಲ ಸದಸ್ಯರು ನಡೆಸುತ್ತಿರುವ ಧರಣಿಗೆ ಶಾಸಕ ಅರುಣಕುಮಾರ ಪೂಜಾರ ಪ್ರತಿಕ್ರಿಯಿಸಿದರು.
ನವದೆಹಲಿ ಮೆ.ವಿವೋಲಿಯಾ ಇಂಡಿಯಾ ಕಂಪನಿ ನವೀನ ಹಾಗೂ ವಿಶೇಷ ತಂತ್ರಜ್ಞಾನದೊಂದಿಗೆ ಈ ಯೋಜನೆಯ ಕಾಮಗಾರಿಯನ್ನು 115 ಕೋಟಿಗೆ ಗುತ್ತಿಗೆ ಹಿಡಿದಿದ್ದು, ಕಾಮಗಾರಿ ಪೂರ್ಣಗೊಂಡ ಮೇಲೆ 8 ವರ್ಷ ಆ ಕಂಪನಿಯವರೇ ಉಸ್ತುವಾರಿ ವಹಿಸಿಕೊಂಡು ನಂತರ ನಗರಸಭೆಗೆ ಹಸ್ತಾಂತರ ಮಾಡುವು ದರಿಂದ ಕಾಮಗಾರಿ ಗುಣಮಟ್ಟ ದಿಂದಲೇ ಕೂಡಿರುತ್ತದೆ ಎಂದು ಶಾಸಕರು ಅಭಿಪ್ರಾಯಿಸಿದರು.
ಶಾಸಕರ ಜೊತೆ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರ ಸಭೆ ಆಯುಕ್ತ ಡಾ. ಮಹಾಂತೇಶ, ಅಭಿಯಂತರರಾದ ಬಿ.ಎಚ್.ಪಾಟೀಲ, ಉಮೇಶ, ಎ.ಸಿ ಹಾದಿಮನಿ, ಗುತ್ತಿಗೆದಾರ ಕಂಪನಿಯ ಮ್ಯಾನೇಜರ್ ವಾಸುದೇವ ಮತ್ತಿತರರಿದ್ದರು.