ದೇವದಾಸಿ ಮಹಿಳೆಯರಿಂದ ಪ್ರತಿಭಟನೆ

ಹರಪನಹಳ್ಳಿ, ಸೆ.26- ಲಾಕ್ ಡೌನ್ ಪರಿಹಾರ ಹಾಗೂ ಕೋವಿಡ್ -19 ಎದುರಿಸಲು ನಮ್ಮೆಲ್ಲಾ ಕುಟುಂಬಗಳಿಗೆ ಮತ್ತು ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕುಟುಂಬಗಳಿಗೆ ಮಾಸಿಕ 7,500 ರೂ. ಸಹಾಯ ಧನವನ್ನು ಕನಿಷ್ಟ ಆರು ತಿಂಗಳು ನೀಡಬೇಕು ಸೇರಿದಂತೆ, ವಿವಿಧ ಬೇಡಿಕೆ ಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಮಾಜಿ ದೇವದಾಸಿಯರು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ನಿನ್ನೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಸಂಘದ ರಾಜ್ಯಾಧ್ಯಕ್ಷೆ ಟಿ.ವಿ.ರೇಣುಕಮ್ಮ ಮಾತನಾಡಿ, ಪ್ರತಿ ಕುಟುಂಬ ಸದಸ್ಯರಿಗೆ 10 ಕೆ.ಜಿ. ಸಮಗ್ರ ಆಹಾರ ಮತ್ತು ಆರೋಗ್ಯ ಕಿಟ್, ಗ್ರಾಮೀಣ ಪ್ರದೇಶದ ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆ, ವಯೋಭೇದವಿಲ್ಲದೇ ದೇವದಾಸಿ ಮಹಿಳೆಯರಿಗೆ ಪಿಂಚಣಿ ಹಾಗೂ ಸಹಾಯ ಧನ ನೀಡುವುದು,    ದೇವದಾಸಿ ಮಹಿಳೆಯರಿಗೆ ನೀಡಲಾದ ಸಹಾಯ ಧನದ ಸಾಲ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲವನ್ನು ಮನ್ನಾ ಮಾಡಬೇಕು ಸೇರಿದಂತೆ, ಹಲವು ಬೇಡಿಕೆಗಳನ್ನು ಇಡಲಾಯಿತು.

ತಾಲ್ಲೂಕು ಅಧ್ಯಕ್ಷೆ ಎ. ಮುತ್ತಮ್ಮ ಮಾತನಾಡಿ, ದೇವದಾಸಿ ಯರಿಗೆ, ಅವರ ಕುಟುಂಬ ಸದಸ್ಯರಿಗೆ ತಲಾ 5 ಎಕರೆ ಜಮೀನು ನೀಡಬೇಕು. ಹಿತ್ತಲು ಹಾಗೂ ನಿವೇಶನ ಸಹಿತ 10 ಲಕ್ಷ ರು. ಮೌಲ್ಯದ ಮನೆ ನೀಡಬೇಕು. ಉದ್ಯೋಗ ಖಾತ್ರಿ ಕೂಲಿಯನ್ನು 600 ರೂ.ಗೆ ಹೆಚ್ಚಿಸಿ, ನಗರ ಪ್ರದೇಶದ ಜನರಿಗೂ ಉದ್ಯೋಗ ಖಾತ್ರಿ ಕೆಲಸ ನೀಡಬೇಕು ಮತ್ತು ಕೆಲಸದ ಅವಧಿಯನ್ನು 200 ದಿನಗಳಿಗೆ ವಿಸ್ತರಿಸಬೇಕು, ಜಾಬ್ ಕಾರ್ಡ್‌ ಇರುವ ಎಲ್ಲರಿಗೂ ಉದ್ಯೋಗ ನೀಡದಿದ್ದಲ್ಲಿ ಕಡ್ಡಾಯವಾಗಿ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಯದರ್ಶಿ ಈರಮ್ಮ, ಉಪಾಧ್ಯಕ್ಷೆ ಕೆ. ಕೆಂಚಮ್ಮ, ಮುಖಂಡರಾದ ಪಾರ್ವತಿ, ಹೂವಕ್ಕ, ಹನುಮಕ್ಕ, ಅಂಜಿನಮ್ಮ, ಕೆಪಿಆರ್‍ಎಸ್ ಮುಖಂಡ ರಾಜಪ್ಪ, ರೆಹಮತ್ ಹಾಗೂ ಇತರರು ಭಾಗವಹಿಸಿದ್ದರು.

error: Content is protected !!